
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರೊಬ್ಬರ ಪುತ್ರಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಜೋಡಿ ಕೊಲೆಯಾಗಿದೆ. ಈ ಎರಡು ಪ್ರತ್ಯೇಕ ಘಟನೆಗಳ ವಿವರ ಈ ಕೆಳಗಿನಂತಿದೆ.

ಹುಬ್ಬಳ್ಳಿ, (ಏಪ್ರಿಲ್ 18): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರೊಬ್ಬ ಪುತ್ರಿಯನ್ನು(hubli-dharwad corporator daughter ) ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಎನ್ನುವರ ಪುತ್ರಿ ನೇಹಾಳನ್ನು ಇಂದು (ಏಪ್ರಿಲ್ 18) ಬಿವಿಬಿ ಕಾಲೇಜ್ ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹಾಡಹಗಲೆ ಹುಬ್ಬಳ್ಳಿಯ(Hubballi)) ಬಿವಿಬಿ ಕಾಲೇಜ್ ನಲ್ಲಿರುವಾಗಲೇ ಹತ್ಯೆ ನಡೆದಿರುವುದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಸದ್ಯ ಮೃತದೇಹವನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೊಲೆ ಮಾಡಿರುವ ಆರೋಪಿಯನ್ನ ಬಂಧನ ಮಾಡಲಾಗಿದೆ. ನಿರಂಜನ ಹಿರಮೇಠ ನಮ್ಮ ಪಕ್ಷದ ಪಾಲಿಕೆ ಸದಸ್ಯರು. ಬಹಳ ಒಳ್ಳೆಯ ಹುಡಗಿ,ಯಾವಾಗಲೂ ಅಂಕಲ್ ಎಂದು ಕರೆಯುತ್ತಿದ್ದಳು. ಹುಬ್ಬಳ್ಳಿಯಲ್ಲಿ ಹೀಗಾಗಬಾರದಿತ್ತು ಎಂದರು.

ಇನ್ನು ನೇಹಾಳನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಆದ್ರೆ, ಯಾರು ಅವರು? ಕೊಲೆ ಮಾಡಿದ್ಯಾಕೆ? ಎನ್ನುವುದು ಇನ್ನೂ ತಿಳಿದುಬಂದಿದಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಜೋಡಿ ಕೊಲೆ
ಇನ್ನೊಂದೆಡೆ ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್ನಲ್ಲಿ ಜೋಡಿ ಕೊಲೆಯಾಗಿದೆ. ಇಂದು(ಏಪ್ರಿಲ್ 18) ಸಂಜೆ ದುಷ್ಕರ್ಮಿಗಳು, ಓರ್ವ ಪುರುಷ ,ಮತ್ತೋರ್ವ ಮಹಿಳೆ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿಲಾಗಿದೆ. ಸುರೇಶ್ ಹಾಗೂ ಅನುಷಾ ಕೊಲೆಯಾದವರು ಎಂದು ತಿಳಿದುಬಂದಿದೆ. ಸಂಜೆ 4.15ರ ಸುಮಾರಿಗೆ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಜೆ.ಪಿ.ನಗರ ಠಾಣೆ ಪೊಲೀಸರು ದೌಡಾಯಿಸಿ ತನಿಖೆ ನಡೆಸಿದ್ದಾರೆ.