
ರಾಮನವಮಿ ದಿನ ದೂರದರ್ಶನ ನ್ಯೂಸ್ ಹೊಸ ಲೋಗೋ ಅನಾವರಣ ಮಾಡಿದೆ. ಕೇಸರಿ ಬಣ್ಣದ ಲೋಗೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಈ ಕುರಿತು ವಿಡಿಯೋ ಪೋಸ್ಟ್ ಮಾಡಿರುವ ದೂರದರ್ಶನ, ಹೊಸ ಅವತಾರದಲ್ಲಿ ದೂರದರ್ಶನ, ಆದರೆ ಬದ್ಧತೆ, ಮೌಲ್ಯದಲ್ಲಿ ರಾಜಿ ಇಲ್ಲ ಎಂದಿದೆ. ಕೇಸರಿ ಬಣ್ಣದ ಹೊಸ ಲೋಗೋಗೆ ಪರ ವಿರೋಧಗಳು ವ್ಯಕ್ತವಾಗಿದೆ.

ನವದೆಹಲಿ(ಏ.17) ದೂರದರ್ಶನ ಹೊಸ ಲೋಗೋ ಅನಾವರಣ ಮಾಡಿದೆ. ಕೇಸರಿ ಬಣ್ಣದ ಹೊಸ ಲೋಗೋ ಹೊಸ ಸಂಚಲನ ಸೃಷ್ಟಿಸಿದೆ. ಲೋಗೋ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಕೇವಲ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಕೆಂಪು ಬಣ್ಣದಲ್ಲಿದ್ದ ಡಿಡಿ ನ್ಯೂಸ್ ಇದೀಗ ಕೇಸರಿ ಬಣ್ಣದಲ್ಲಿ ಇದೆ .

ಹೊಸ ಅವತಾರ, ಹೊಸ ಲೋಗೋ ಕುರಿತು ಡಿಡಿ ನ್ಯೂಸ್ ಮಹತ್ವದ ಪೋಸ್ಟ್ ಮಾಡಿದೆ. ವಿಡಿಯೋ ಪೋಸ್ಟ್ ಮಾಡಿರು ದೂರದರ್ಶನ ನ್ಯೂಸ್, ನಮ್ಮ ಮೌಲ್ಯಗಳು ಒಂದೇ, ಆದರೆ ಹೊಸ ಅವತಾರದಲ್ಲಿ ಬಂದಿದ್ದೇವೆ. ಹಿಂದೆಂದೂ ಇಲ್ಲದಂತ ಸುದ್ದಿ ಪ್ರಯಾಣಕ್ಕಾಗಿ ಸಿದ್ದರಾಗಿ. ಹೊಸ ಡಿಡಿ ನ್ಯೂಸ್ ಅನುಭವಿಸಿ ಎಂದು ಡಿಡಿ ನ್ಯೂಸ್ ಹೇಳಿದೆ. ನಿಖರತೆ, ಸತ್ಯ, ಸಂವೇದನೆಯೊಂದಿಗೆ ಡಿಡಿ ನ್ಯೂಸ್. ಡಿಡಿ ನ್ಯೂಸ್‌ನಲ್ಲಿ ಬಂದರೆ ಅದು ಸತ್ಯ ಎಂದು ಡಿಡಿ ನ್ಯೂಸ್ ಹೇಳಿದೆ

ನಾವು ಹೊಸ ಅವತಾರದಲ್ಲಿ ಬಂದಿದ್ದೇವೆ, ಹೊಸ ಲೋಗೋ ಅನಾವರಣ ಮಾಡಿದ್ದೇವೆ. ಆದರೆ ನಮ್ಮ ಮೌಲ್ಯಗಳು ಬದಲಾಗುವುದಿಲ್ಲ. ನಮ್ಮ ಹೊಸ ಪಯಣದಲ್ಲಿ ಪಾಲ್ಗೊಳ್ಳಿ, ಹಿಂದೆಂದೂ ಕಾಣದ ಡಿಡಿ ನ್ಯೂಸ್ ಸುದ್ದಿಯನ್ನು ಅನುಭವಿಸಿ ಎಂದು ಡಿಡಿ ನ್ಯೂಸ್ ಹೇಳಿದೆ. ವಾಹಿನಿಯಲ್ಲಿನ ಲೋಗೋ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ ಸೇರಿದಂತೆ ಎಲ್ಲೆಡೆ ಲೋಗೋ ಬದಲಾಗಿದೆ.
ಡಿಡಿ ನ್ಯೂಸ್ ಹೊಸ ಲೋಗೋಗೆ ಪರ ವಿರೋಧಗಳು ವ್ಯಕ್ತವಾಗಿದೆ. ಕೆಲವರು ಡಿಡಿ ನ್ಯೂಸ್ ಹೊಸ ಲೋಗೋವನ್ನು ಸ್ವಾಗತಿಸಿದ್ದಾರೆ. ಡಿಡಿ ನ್ಯೂಸ್ ವಿಶ್ವಾಸಾರ್ಹತೆ ಗಳಿಸಿಕೊಂಡ ಸುದ್ದಿ ವಾಹನಿ. ಡಿಡಿ ನ್ಯೂಸ್ ಸುದ್ದಿಗಳು ಜನರನ್ನು ತಲುಪಿದೆ. ಇದೀಗ ಹೊಸ ಅವತಾರದಲ್ಲಿ ಡಿಡಿ ನ್ಯೂಸ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದ್ದಾರೆ.

ಇದೇ ವೇಳೆ ಕೆಲವರು ಕೇಸರಿ ಬಣ್ಣ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಡಿಡಿ ನ್ಯೂಸ್ ವಾಹಿನಿಯನ್ನು ಕೇಸರಿಕರಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.