
ನವದೆಹಲಿ/ಟೆಹರಾನ್: ಮಧ್ಯಪ್ರಾಚ್ಯದಲ್ಲಿ(Middle East) ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಮುಂಬೈಗೆ (Mumbai) ಬರುತ್ತಿದ್ದ ಇಸ್ರೇಲ್ ಮಾಲೀಕತ್ವದ ಸರಕು ಸಾಗಾಣೆ ಹಡಗನ್ನು (Container Ship) ಇರಾನ್ ವಶಪಡಿಸಿಕೊಂಡಿದೆ.
ಯುಎಇಯಿಂದ ಸರಕು ತುಂಬಿಸಿಕೊಂಡು ಮುಂಬೈ (Mumbai) ಬಂದರಿಗೆ ಬರುತ್ತಿದ್ದ MCS Aries ಹೆಸರಿನ ಕಂಟೈನರ್ ಶಿಪ್ ಅನ್ನು Strait of Hormuz ಬಳಿ ವಶಪಡಿದೆ. ವಶಪಡಿಸಿದ ಹಡಗು ಈಗ ಇರಾನ್ (Iran) ಜಲ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ ಎಂದು ವರದಿಯಾಗಿದೆ

ಈ ಹಡಗಿನಲ್ಲಿ 17 ಮಂದಿ ಭಾರತೀಯರಿದ್ದು ಇವರ ಬಿಡುಗಡೆ ಸಂಬಂಧ ಭಾರತ ಇರಾನ್ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಇಸ್ರೇಲ್ ಮೇಲೆ 48 ಗಂಟೆಯ ಒಳಗಡೆ ಇರಾನ್ ದಾಳಿ ನಡೆಸಬಹುದು ಎಂಬ ವರದಿಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಪೋರ್ಚುಗೀಸ್ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿದ್ದಾರೆ. ಈ ಹಡಗು ಇಸ್ರೇಲಿ ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು.
ಸೋವಿಯತ್ ಕಾಲ ಮಿಲ್ ಎಂಐ -17 ಹೆಲಿಕಾಪ್ಟರ್ ಬಳಸಿ ಈ ದಾಳಿ ಮಾಡಿದ್ದು, ಇದನ್ನು ಇರಾನಿನ ರೆವಲ್ಯೂಷನ್ ಗಾರ್ಡ್ ಮತ್ತು ಇರಾನ್ ಬೆಂಬಲಿತ ಯೆಮೆನ್ ಹೌತಿ ಬಂಡುಕೋರರು ಈ ಹಿಂದೆ ಬಳಸಿದ್ದರು.

ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್ (Israel) ಮೇಲೆ ಇರಾನ್ ದಾಳಿ ನಡೆಸಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧಾರಿಸಿ ಶುಕ್ರವಾರ ಮಾಧ್ಯಮಗಳು ವರದಿ ಮಾಡಿದ್ದವು. ಏಪ್ರಿಲ್ 1 ರಂದು ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಬಾಂಬ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಮಾಂಡರ್ ಸೇರಿದಂತೆ 7 ಮಂದಿ ಇರಾನ್ ಮಿಲಿಟರಿ ಸಲಹೆಗಾರರು ಮೃತಪಟ್ಟಿದ್ದರು. ಈ ಏರ್ ಸ್ಟ್ರೈಕ್ ಅನ್ನು ಇಸ್ರೇಲ್ ಮಾಡಿದೆ ಎಂದು ಇರಾನ್ ದೂರಿದರೆ ಇಸ್ರೇಲ್ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಈ ದಾಳಿಗೆ ಪ್ರತೀಕಾರವಾಗಿ ನಾವು ಇಸ್ರೇಲ್ ಮೇಲೆ ದಾಳಿ ಮಾಡುತ್ತೇವೆ ಎಂದು ಇರಾನ್ ಎಚ್ಚರಿಕೆ ನೀಡಿತ್ತು.