
ಬೆಂಗಳೂರು: ನಿಂತಿದ್ದ ಬೈಕ್ಗೆ ರಭಸದಿಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಮಹಮ್ಮದ್ ಫಾರೂಖ್, ಅಬ್ರಾರ್ ಅಹ್ಮದ್ ಸಾವನ್ನಪ್ಪಿರುವ ದುರ್ದೈವಿಗಳು. ಇನೊಬ್ಬ ಯುವಕ ಮಹಮ್ಮದ್ ಸಿದ್ದಿಕ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೆಗ್ಗನಹಳ್ಳಿ ಬಳಿ ಬೈಕ್ ನಿಲ್ಲಿಸಿಕೊಂಡು ಯುವಕರು ನಿಂತುಕೊಂಡಿದ್ದರು. ಆಗ ಟಾಟಾ ಏಸ್ ವಾಹನ ಅತಿ ವೇಗವಾಗಿ ಬಂದು ನಿಂತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಬಳಿಕ ಮುಂದೆ ಇದ್ದ ಯುವಕರ ಮೇಲೆ ನುಗ್ಗಿದೆ.

ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವನು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಇಬ್ಬರು ಯುವಕರು ಸ್ಕ್ರಾಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ರಂಜಾನ್ ಉಪವಾಸ ಮುಗಿಸಿ ತಂದೆ ಬಳಿ ಹಣ ಇಸ್ಕೊಂಡು ಚಪ್ಪಲಿ ಖರೀದಿಸಲು ಬಂದಾಗ ದುರಂತ ಸಂಭವಿಸಿದೆ.

ಬೈಕ್ಗೆ ಡಿಕ್ಕಿಯಾದ ನಂತರ ಟಾಟಾ ಏಸ್ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಪೀಣ್ಯಾ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೃತರ ಕುಟುಂಬಸ್ಥರು ಪ್ರಕರಣ ದಾಖಲು ಮಾಡಿದ್ದಾರೆ.

