
ತೀರ್ಥಹಳ್ಳಿ: ರಾಮೇಶ್ವರಂ ಸ್ಫೋಟದ ಎನ್ಐಎ ವಿಚಾರಣೆಗೆ ಸಂಬಂಧಪಟ್ಟಂತೆ ತೀರ್ಥಹಳ್ಳಿಯಲ್ಲಿ ಬಿಜೆಪಿ ನಗರ ಘಟಕದ ಮುಖಂಡನನ್ನು ಕರೆದಿರುವುದಾಗಿ ತಿಳಿದು ಬಂದಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ಹಿಂದೆ ಬೆಳ್ಳಂಬೆಳಿಗ್ಗೆ ಎನ್ಐಎ ಹಲವು ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು

ಅದರ ಬೆನ್ನಲ್ಲೆ ತೀರ್ಥಹಳ್ಳಿಯ ಬಿಜೆಪಿಯ ಘಟಕದ ಮುಖಂಡನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.ಈ ಹಿಂದೆ ಮೊಬೈಲ್ ಅಂಗಡಿಯ ಇಬ್ಬರು ಯುವಕರನ್ನು ವಿಚಾರಣೆ ನಡೆಸಿದ್ದ ಎನ್ಐಎ ತಂಡ ಈ ಹುಡುಗರ ಜೊತೆ ನಗರ ಘಟಕದ ಮುಖಂಡ ಸಂಪರ್ಕ ಇದ್ದ ಕಾರಣ ವಿಚಾರಣೆಗೆ ಒಳಪಡಿಸಿರಬಹುದು ಎಂದು ಹೇಳಲಾಗುತ್ತಿದೆ.

ಶುರುವಾಯ್ತು ಆರೋಪ-ಪ್ರತ್ಯಾರೋಪ
ತೀರ್ಥಹಳ್ಳಿ ಬಿಜೆಪಿ ಮುಖಂಡನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಇತ್ತ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ. ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ. ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು NIA ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ಧರ್ಮ ರಕ್ಷಣೆ ಹೆಸರಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತೀರೋ ಕೇಸರಿ ಭಯೋತ್ಪಾದನೆ ಎಷ್ಟು ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ? ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿಯು ಇದಕ್ಕೇನು ಹೇಳುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರೆಸಿದ ರಾಜ್ಯ ಬಿಜೆಪಿ ನಾಯಕರು ಈಗ ಉತ್ತರ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ
