
ಬೆಂಗಳೂರಿನ ಹೊರ ವಲಯ ತುರಹಳ್ಳಿ ಅರಣ್ಯ ಪ್ರದೇಶದ ಬಳಿ ಬರುತ್ತಿದ್ದ ಬಿಎಂಟಿಸಿ ಬಸ್ನೊಳಗೆ ಚಿರತೆ ಮರಿ ನುಗ್ಗಲು ಯತ್ನಿಸಿದೆ. ಈ ವೇಳೆ ಬಳಲಿದ್ದ ಚಿರತೆ ಮರಿಗೆ ನೀರು ಕುಡಿಸಲು ಮುಂದಾದ ಬಸ್ ಚಾಲಕನ ಮೇಲೆ ದಾಳಿ ಮಾಡಿದೆ.

ರಾಜ್ಯ ರಾಜಧಾನಿ ಬೆಂಗಳೂರಿನ ಹೊರ ವಲಯದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದೆ. ಇನ್ನು ತುರಹಳ್ಳಿ ಫಾರೆಸ್ಟ್ ಬಳಿ ಬರುತ್ತಿದ್ದ ಬಿಎಂಟಿಸಿ ಬಸ್ಗೆ ಚಿರತೆ ಮರಿಯೊಂದು ಅಡ್ಡಬಂದಿದೆ. ಕೂಡಲೇ ಬಸ್ನ ಬಾಗಿಲು ಮುಚ್ಚಿ ಪ್ರಯಾಣಿಕರಿಗೆ ಇಳಿಯದಂತೆ ಸೂಚನೆ ನೀಡಿದ್ದ ಡ್ರೈವರ್ ಕೆಳಗಿಳಿದು ಬಂದು ಚಿರತೆ ಮರಿಗೆ ನೀರು ಕುಡಿಸಲು ಮುಂದಾಗಿದ್ದರು. ಈ ವೇಳೆ ಚಿರತೆ ಮರಿ ದಾಳಿ ಮಾಡಿದೆ. ನಂತರ, ಅಕ್ಕ-ಪಕ್ಕದಲ್ಲಿ ಜಮಾವಣೆ ಆಗಿದ್ದ ವಾಹನಗಳ ಚಾಲಕರು ಚಿರತೆಯನ್ನು ಓಡಿಸಿದ್ದಾರೆ. ಆಗ ಚಿರತೆ ಬಸ್ ಕೆಳಗೆ ಕುಳಿತಿತ್ತು, ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ.

