
ಚೆನ್ನೈ: ಲೋಕಸಭಾ ಚುನಾವಣೆ ರಂಗೇರಿದ್ದು ಎಲ್ಲ ಕಡೆ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ಮುಳುಗಿದ್ದಾರೆ. ಇದರ ಮಧ್ಯೆ ಒಬ್ಬರ ಮೇಲೋಬ್ಬರು ವಾಗ್ವಾದದಲ್ಲಿ ತೊಡಗಿದ್ದಾರೆ. ಇದರ ನಡುವೆ ಈ ಬಾರಿ ಲೋಕ ಸಮರದಲ್ಲಿ ಕರ್ನಾಟಕದ ಕಾಡುಗಳ್ಳ, ಗಂಧದ ಮರಗಳ್ಳತನ ಮಾಡಿದ್ದ ವೀರಪ್ಪನ್ ಪುತ್ರಿ ವಿದ್ಯಾರಾಣಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.

ಸದ್ಯ ವೀರಪ್ಪನ್ ಪುತ್ರಿ ವಿದ್ಯಾರಾಣಿಯವರು ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ. ನಾಮ್ ತಮಿಜರ್ ಕಚ್ಚಿ (NTK) ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ವಿದ್ಯಾರಾಣಿ ತನ್ನ ತಂದೆಯ ಹೆಸರಲ್ಲಿ ಕಾಂಪೇನ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ವಾಹನಕ್ಕೆ ಕಾಡುಗಳ್ಳ ವೀರಪ್ಪನ್ ಫೋಟೋ ಇರುವ ಬ್ಯಾನರ್ ಹಾಕಿಕೊಂಡು ಕ್ಯಾಂಪೇನ್ ಮಾಡುತ್ತಿದ್ದು ನನ್ನ ತಂದೆಯೇ ನನಗೆ ಸ್ಫೂರ್ತಿ ಎಂದು ಪ್ರಚಾರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ವೃತ್ತಿಯಲ್ಲಿ ವಕೀಲೆಯಾಗಿರುವ ವಿದ್ಯಾರಾಣಿಯವರು 2020 ಜುಲೈನಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಆ ನಂತರ ರಾಜ್ಯದ ಯೂತ್ ವಿಂಗ್ಗೆ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದರು. ಆದರೆ ಕಾರಣಾಂತರದಿಂದ ಬಿಜೆಪಿಯನ್ನು ತೊರೆದಿದ್ದ ವಿದ್ಯಾ ಸದ್ಯ ಎನ್ಟಿಕೆ ಪಕ್ಷದಿಂದ ಲೋಕ ಸಮರಕ್ಕೆ ಇಳಿದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಪ್ರಚಾರದಲ್ಲಿ ವೀರಪ್ಪನ್ ಬ್ಯಾನರ್ ಬಳಸಿರುವುದಕ್ಕೆ ರಾಜ್ಯದ ಕೆಲವರಿಗೆ ಬೇಸರ ತರಿಸಿದೆ.
