

ಮಂಗಳೂರು, ಮಾ. 26: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ತಯಾರಿ ನಡೆದಿದ್ದು, ಸುಮಾರು 50ರಿಂದ 60 ಸಾವಿರ ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ. ಲೋಕಸಭಾ ಚುನಾವಣೆಯ ತಯಾರಿ ಕುರಿತಂತೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಸುದ್ದಿಗೋಷ್ಟಿಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.

ತಾವು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವುಗಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೇ ಸುಮಾರು 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ ಎಂದು ಸ್ಥಳೀಯ ಶಾಸಕರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಬಿಜೆಪಿ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಹಾಗಾಗಿ ಅವರ ಹೇಳಿಕೆ ನಮಗೆ ಮುಖ್ಯವಲ್ಲ ಎಂದರು.



ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರ ಚುನಾವಣಾ ಕಚೇರಿಯನ್ನು ಮಂಗಳೂರು ಲಾಲ್‌ಬಾಗ್‌ನಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಜನಾರ್ದನ ಪೂಜಾರಿ ಅವರು ಅಭ್ಯರ್ಥಿ ಪದ್ಮರಾಜ್ ಆರ್. ಅವರಿಗೆ ಶುಭ ಹಾರೈಸಿದರು.
ಏಪ್ರಿಲ್ 3ರಂದು ನಾಮಪತ್ರ ಸಲ್ಲಿಕೆ : ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರ ಪರವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ತೆರಳಿ ಪ್ರಚಾರ ಕಾರ್ಯ ನಡೆಸಲಾಗುವುದು. ಏ.11ರಂದು ಸುಳ್ಯ, 12ರಂದು ಮುಲ್ಕಿ, 13ರಂದು ಪುತ್ತೂರು, 14ರಂದು ಮಂಗಳೂರು ದಕ್ಷಿಣ, 15ರಂದು ಉಳ್ಳಾಲ, 16ರಂದು ಮಂಗಳೂರು ಉತ್ತರ, 17ರಂದು ಬೆಳ್ತಂಗಡಿ, 18ರಂದು ಬಂಟ್ವಾಳಕ್ಕೆ ಅಭ್ಯರ್ಥಿ ಸಹಿತ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಪುತ್ತೂರಿಗೆ ಆಗಮಿಸಲಿದ್ದು ಅಲ್ಲಿಯೇ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಆಯೋಜಿಸಲಾಗುವುದು ಎಂದರು.

ಎಲ್ಲಾ ಬ್ಲಾಕ್ ಗಳಲ್ಲಿ ಮಾ. 27ರಿಂದ 30ರವರೆಗೆ ಬ್ಲಾಕ್, ವಿಧಾನಸಭಾ ಕ್ಷೇತ್ರಗಳ ಸಭೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ದಿನದಂದು ಮಂಗಳೂರು ಪುರಭವದಲ್ಲಿ ಸಮಾವೇಶ ನಡೆದು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಬಳಿಕ ಎ. 11ರಿಂದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಆರಂಭದಲ್ಲಿ ಸುಳ್ಯದಲ್ಲಿ, ಎ. 12ರಂದು ಮೂಡಬಿದ್ರೆ, ಎ.13ರಂದು ಪುತ್ತೂರು, 14ರಂದು ಮಂಗಳೂರು ದಕ್ಷಿಣ, 15ರಂದು ಉಳ್ಳಾಲ, 16ರಂದು ಮಂಗಳೂರು ಉತ್ತರ, 17ರಂದು ಬೆಳ್ತಂಗಡಿ, 18ರಂದು ಬಂಟ್ವಾಳದಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಏ.19ರಿಂದ ಎರಡನೇ ಸುತ್ತಿನ ಪ್ರಚಾರ ಕಾರ್ಯ ನಡೆಯಲಿದೆ. ಮಾ.24ಕ್ಕೆ ಪ್ರಚಾರ ಕಾರ್ಯ ಅಂತ್ಯವಾಗಲಿದ್ದು, 26ರಂದು ಚುನಾವಣೆ ನಡೆಯಲಿದೆ ಎಂದು ವಿವರಿಸಿದರು.
ಹೊಸ ಮುಖಕ್ಕೆ ಅವಕಾಶ ನೀಡಿದ್ದಾರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎನ್ನುವುದು ಕಾರ್ಯಕರ್ತರ ಅಭಿಲಾಷೆಯಾಗಿತ್ತು. ಅದರಂತೆ ರಾಜಕೀಯದ ಜೊತೆಗೆ ಸಾಮಾಜಿಕ, ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಪದ್ಮರಾಜ್ ಆರ್. ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಸಮರ್ಥ ಹಾಗೂ ಉತ್ತಮ ಅಭ್ಯರ್ಥಿಯನ್ನು ನೇಮಕ ಮಾಡಿರುವ ಕಾರಣಕ್ಕೆ ಕಾಂಗ್ರೆಸ್ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್., ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮುಡಾ ಅಧ್ಯಕ್ಷ ಸದಾಶಿವ ಉಲ್ಲಾಳ್, ಪ್ರಮುಖರಾದ ಯು.ಕೆ. ಮೋನು, ಶಾಹುಲ್ ಹಮೀದ್ ಉಪಸ್ಥಿತರಿದ್ದರು.