
ಹೈದರಾಬಾದ್: ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದಲ್ಲಿ ಸಂಚಲನ ಮೂಡಿಸಿದ್ದ ಚೆಡ್ಡಿಗ್ಯಾಂಗ್ ಈಗ ತೆಲಂಗಾಣಕ್ಕೆ ಶಿಫ್ಟ್ ಆಗಿದೆ. ಶಾಲೆಯೊಂದಕ್ಕೆ ಮಧ್ಯರಾತ್ರಿ ನುಗ್ಗಿರುವ ಚೆಡ್ಡಿಗ್ಯಾಂಗ್ನ ಇಬ್ಬರು ಖದೀಮರು 7.85 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ.
ಚೆಡ್ಡಿಗ್ಯಾಂಗ್ ಕಳ್ಳತನ ಮತ್ತೊಮ್ಮೆ ಸಂಚಲನ ಮೂಡಿಸಿದೆ. ಈ ಬಾರಿ ಹೈದರಾಬಾದ್ ನಗರದ ಮಿಯಾಪುರದ ಹಫೀಜ್ಪೇಟೆಯ ವರ್ಲ್ಡ್ ಒನ್ ಖಾಸಗಿ ಶಾಲೆಗೆ ಇಬ್ಬರು ಖದೀಮರು ನುಗ್ಗಿದ್ದಾರೆ. ಚೆಡ್ಡಿ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವ ಕಳ್ಳರು ಕೈಯಲ್ಲಿ ಮಾರಕಾಯುಧಗಳನ್ನ ಹಿಡಿದುಕೊಂಡಿದ್ದಾರೆ. ಶಾಲೆಯ ಆಫೀಸ್ ರೂಮ್ನಲ್ಲಿದ್ದ 7.85 ಲಕ್ಷ ರೂಪಾಯಿ ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.


ಸದ್ಯ ಶಾಲೆಯ ಮಾಲೀಕರು ಮಿಯಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಚಡ್ಡಿಗ್ಯಾಂಗ್ನವರು ಕಳ್ಳತನ ಮಾಡುತ್ತಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕೆಲ ದಿನಗಳಿಂದ ಕಾಣದ ಚೆಡ್ಡಿ ಗ್ಯಾಂಗ್ ಮತ್ತೆ ನಗರದಲ್ಲಿ ಪ್ರತ್ಯಕ್ಷವಾಗಿದ್ದರಿಂದ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.

