
ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿರುವುದಕ್ಕೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ (ಮಾ.13) ಸಂಜೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸುತ್ತಿದ್ದಂತೆ ‘ಗೋ ಬ್ಯಾಕ್ ಶೋಭಕ್ಕಾ’ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಬೀದಿಗಳಿದ ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ನಮ್ಮ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅಭ್ಯರ್ಥಿಯಾಗಿ ಬರೋದು ಬೇಡ ಎಂದಿದ್ದಾರೆ.


ಸ್ಥಳೀಯ ಒಕ್ಕಲಿಗರ ನಾಯಕರಲ್ಲಿ ಯಾರಿಗಾದರು ಟಿಕೆಟ್ ಕೊಡಿ. ಇಲ್ಲಾ ಹಾಲಿ ಸಂಸದ ಸದಾನಂದಗೌಡ ಅವರನ್ನೇ ಮತ್ತೊಮ್ಮೆ ಕಣಕ್ಕಿಳಿಸಿ. ಆದರೆ, ದಯವಿಟ್ಟು ಶೋಭಾ ಕರಂದ್ಲಾಜೆ ಮಾತ್ರ ಬೇಡ ಎಂದು ಹೇಳಿದ್ದಾರೆ.
ಶೋಭಾ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೇ ಜನರು ಗೋ ಬ್ಯಾಕ್ ಎಂದಿದ್ದಾರೆ. ಅವರು ಅಭಿವೃದ್ದಿ ಮಾಡಿಲ್ಲ ಎಂಬ ಆರೋಪವನ್ನು ಅಲ್ಲಿನ ಕಾರ್ಯಕರ್ತರು ಮಾಡಿದ್ದಾರೆ. ಅಂತವರನ್ನು ಇಲ್ಲಿಗೆ ಕರೆದುಕೊಂಡು ಬಂದರೆ ನಮ್ಮ ಕ್ಷೇತ್ರದ ಪರಿಸ್ಥಿತಿ ಏನು ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಶೋಭಾ ಅವರ ಕ್ಷೇತ್ರ ಬದಲಿಸಿದ ಬಿಜೆಪಿ ಹೈಕಮಾಂಡ್ ಬೆಂಗಳೂರು ಉತ್ತರದ ಟಿಕೆಟ್ ನೀಡಿದೆ. ಈ ಕ್ಷೇತ್ರದ ಹಾಲಿ ಸಂಸದ ಸದಾನಂದಗೌಡ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ. ಶೋಭಾ ಅವರ ಬದಲಿಗೆ ಉಡುಪಿ-ಚಿಕ್ಕಮಗಳೂರಿಗೆ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಕಣಕ್ಕಿಳಿಸಲಾಗಿದೆ.
