
ರಾಜ್ಯದಲ್ಲಿ ಸಿಎಎ ಜಾರಿ ತರುವ ಕುರಿತು ಗುರುವಾರ ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗುವುದು. ಆ ಕಾಯ್ದೆಯಲ್ಲೇನಿದೆ ಎಂಬುದನ್ನು ಪರಿಶೀಲಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
(ಮಾ.14): ರಾಜ್ಯದಲ್ಲಿ ಸಿಎಎ ಜಾರಿ ತರುವ ಕುರಿತು ಗುರುವಾರ ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗುವುದು. ಆ ಕಾಯ್ದೆಯಲ್ಲೇನಿದೆ ಎಂಬುದನ್ನು ಪರಿಶೀಲಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ಲೋಕಸಭಾ ಚುನಾವಣೆ ಉದ್ದೇಶದಿಂದ ಈಗ ಸಿಎಎ ಜಾರಿಗೆ ತಂದಿದೆ. ಇದಕ್ಕೂ ಮೊದಲು ಯಾಕೆ ಜಾರಿಗೆ ತಂದಿಲ್ಲ. ಇಷ್ಟು ವರ್ಷ ಯಾಕೆ ಸುಮ್ಮನಿತ್ತು? ಈಗ ಸೋಲುವ ಭಯದಿಂದಲೇ ಸಿಎಎ ಜಾರಿಗೆ ತಂದಿದೆ ಎಂದು ಆರೋಪಿಸಿದರು.

ಕಾಂಗ್ರೆಸಿಗೆ ಹೆಗ್ಡೆ ಶಕ್ತಿ: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ಗೆ ಬಂದಿರುವುದರಿಂದ ಶಕ್ತಿ ಬಂದಂತಾಗಿದೆ. ಅವರು ಹಿಂದೆ ಕಾಂಗ್ರೆಸ್ ನಲ್ಲಿಯೇ ಇದ್ದವರು, ಈಗ ಪಕ್ಷಕ್ಕೆ ಮರಳಿ ಬಂದಿದ್ದಾರೆ. ಹೆಗ್ಡೆ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವ ವಿಚಾರ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಪ್ರತಿಕ್ರಿಯಿಸಿದರು.

ಏರ್ಪೋರ್ಟಲ್ಲಿ ಇಂದಿರಾ ಕ್ಯಾಂಟೀನ್ ಶುರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 600 ಇಂದಿರಾ ಕ್ಯಾಂಟೀನ್‍ಗಳು ತಲೆ ಎತ್ತಲಿವೆ. 188 ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸುತ್ತಿದ್ದೇವೆ. ಈ ಪೈಕಿ ಈಗಾಗಲೇ 40 ಸಿದ್ಧವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
