
Citizenship Amendment Act: ಕೇಂದ್ರ ಸರ್ಕಾರವು ಭಾರತದದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ದೇಶಾದ್ಯಂತ ಸಿಎಎ ಪೌರತ್ವ ಕಾಯ್ದೆಯ ನಿಯಮಗಳ ಅಧಿಸೂಚನೆ ಹೊರಬಿದ್ದಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಈ ಹಿಂದೆ ನೀಡಿದ್ದ ಭರವಸೆಯಂತೆ ಸಿಎಎ ಜಾರಿಗೊಳಿಸಿದೆ

ನವದೆಹಲಿ(ಮಾರ್ಚ್ 11) ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ಭಾರತದದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ( Citizenship Amendment Act) ಅಧಿಸೂಚನೆ ಹೊರಡಿಸಿದೆ. ಈ ಮೂಲಕ ದೇಶಾದ್ಯಂತ ಸಿಎಎ ಪೌರತ್ವ ಕಾಯ್ದೆಯ ನಿಯಮಗಳ ಅಧಿಸೂಚನೆ ಹೊರಬಿದ್ದಿದೆ. 2019ರಲ್ಲಿ ಸಂಸತ್ತಿನಲ್ಲಿ ಸಿಎಎ ಕಾಯ್ದೆಗೆ ಅನುಮೋದನೆ ಸಿಕ್ಕರೂ, ಅಧಿಸೂಚನೆ ಹೊರಡಿಸಿರಲಿಲ್ಲ. ಆದ್ರೆ, ಇತ್ತೀಚೆಗೆ ಸಿಎಎ ಜಾರಿಗೊಳಿಸುವುದಾಗಿ ಅಮಿತ್ ಶಾ ಪುನರುಚ್ಚರಿಸಿದ್ದರು. ಇದರಂತೆ ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಸಿಎಎ ಅಧಿಸೂಚನೆ ಹೊರಡಿಸಲಾಗಿದೆ.

2019ರ ಡಿಸೆಂಬರ್ 11ರಂದು ಸಂಸತ್ನಲ್ಲಿ ಸಿಎಎ ಅಂಗೀಕಾರಗೊಂಡಿತ್ತು. ಇದೀಗ ಸಿಎಎ ಜಾರಿಗೊಳಿಸಿ ಅಧಿಸೂಚನೆ ಹೊರಬಿದ್ದಿದ್ದು, 2014ರ ಡಿ.31ಕ್ಕೂ ಮುನ್ನ ಭಾರತಕ್ಕೆ ಆಗಮಿಸಿದವರಿಗೆ ನಿಯಮ ಅನ್ವಯವಾಗುತ್ತದೆ. ಈ ಮೊದಲು 11 ವರ್ಷ ಭಾರತದಲ್ಲೇ ನೆಲೆಸಿದವರಿಗೆ ಅವಕಾಶವಿತ್ತು. ಆದ್ರೆ, ಈಗ ತಿದ್ದುಪಡಿ ಮಾಡಿ 11 ವರ್ಷದಿಂದ ಈಗ 5 ವರ್ಷಕ್ಕೆ ಇಳಿಸಲಾಗಿದ್ದು, ಮುಸ್ಲಿಮೇತರ ವ್ಯಕ್ತಿಗಳು 6 ವರ್ಷ ಕಾಲ ಅಥವಾ ಅದಕ್ಕೂ ಮೇಲ್ಪಟ್ಟು ಭಾರತದಲ್ಲೇ ವಾಸ ಮಾಡಿದ್ದರೆ ಅಂಥವರಿಗೆ ಪೌರತ್ವ ನೀಡಲಾಗುತ್ತದೆ. ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿಗಳಿಗೆ ಪೌರತ್ವ ನೀಡಲಾಗುತ್ತದೆ.

ಹಲವೆಡೆ ಪೊಲೀಸ್ ಬಂದೋಬಸ್ತ್
ಸಿಎಎ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿರು ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಶಾಹೀನ್ ಬಾಗ್ ಸೇರಿ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾಕಂದ್ರೆ, ಸಿಎಎ ಜಾರಿಗೊಳಿಸುವ ಸಂಬಂಧ ಈ ಹಿಂದೆ ದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಇದರಿಂದ ಇದೀಗ ಎಲ್ಲೆಡೆ ಭದ್ರತೆ ಕೈಗೊಳ್ಳಲಾಗಿದೆ.

ಪ್ರಮುಖವಾಗಿ ಈ ಕಾಯ್ದೆಯಡಿ ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಗಾನಿಸ್ತಾನದಿಂದ ಭಾರತಕ್ಕೆ 2014ರ ಡಿಸೆಂಬರ್ 31ಕ್ಕಿಂತ ಮೊದಲು ಆಗಮಿಸಿ ನೆಲೆಸಿದವರಿಗೆ ಭಾರತದ ಪೌರತ್ವ ನೀಡುವ ಕುರಿತಾಗಿದೆ. ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನ ಈ ಮೂರು ದೇಶಗಳಲ್ಲಿ ನಡೆದ ನರಮೇಧ, ದೌರ್ಜನ್ಯಗಳಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು ನೆಲೆಸಿದವರಿಗೆ ಪೌರತ್ವ ನೀಡುವ ಕುರಿತು ಕಾಯ್ದೆ ಹೇಳುತ್ತದೆ. ಈ ಕಾಯ್ದೆಯಲ್ಲಿ ಪ್ರಮುಖಾಗಿ ಉಲ್ಲೇಖಿಸಿರುವ ಅಂಶ, ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವುದಾಗಿದೆ.