
🛑SBI ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ CJ ಪೀಠ
ನಾಳೆಯೊಳಗೆ ಚುನಾವಣಾ ಬಾಂಡ್ ವಿವರವನ್ನು ನೀಡಲು ಆದೇಶ
ಮಾರ್ಚ್ 15ರೊಳಗೆ ಬಾಂಡ್ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು
ನವದೆಹಲಿ: ಚುನಾವಣಾ ಬಾಂಡ್ ವಿವರ ಬಹಿರಂಗಪಡಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಮತ್ತೊಂದು ಮಹತ್ವದ ಆದೇಶ ನೀಡಿದೆ. SBI ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ ಖಡಕ್ ಸೂಚನೆ ನೀಡಿದೆ.

ಚುನಾವಣಾ ಬಾಂಡ್ ವಿವರ ನೀಡಲು ಸಮಯ ಕೋರಿ ಎಸ್‌ಬಿಐ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್ ಸಿಜೆ ಪೀಠ, ನಾಳೆಯೊಳಗೆ ಚುನಾವಣಾ ಬಾಂಡ್ ವಿವರವನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಬೇಕು. ಬಳಿಕ ಚುನಾವಣಾ ಆಯೋಗ ಮಾರ್ಚ್ 15ರೊಳಗೆ ಬಾಂಡ್ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಆದೇಶಿಸಿದೆ.

ಚುನಾವಣಾ ಬಾಂಡ್ ವಿವರ ನೀಡಲು ಜೂನ್ 30ರವರೆಗೂ ಕಾಲಾವಕಾಶ ನೀಡುವಂತೆ ಎಸ್‌ಬಿಐ ಸುಪ್ರೀಂಕೋರ್ಟ್‌ನಲ್ಲಿ ಮನವಿ ಮಾಡಿತ್ತು. ಆದರೆ ಎಸ್‌ಬಿಐ ಮನವಿಯನ್ನು ನಿರಾಕರಿಸಿರುವ ನ್ಯಾಯಾಲಯ ನಾಳೆಯೊಳಗೆ ಚುನಾವಣಾ ಬಾಂಡ್ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಕಟ್ಟಪ್ಪಣೆ ಹೊರಡಿಸಿದೆ. ಕೇಂದ್ರ ಚುನಾವಣಾ ಆಯೋಗವೂ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವುಂತೆ ನಿರ್ದೇಶನ ನೀಡಿದೆ

ಏನಿದು ಚುನಾವಣಾ ಬಾಂಡ್..?
2018ರಲ್ಲಿ ಕೇಂದ್ರ ಸರ್ಕಾರವು ಎಲೆಕ್ಟೋರಲ್ ಬಾಂಡ್ ಯೋಜನೆ ಪ್ರಾರಂಭಿಸಿತು. ರಾಜಕೀಯ ಪಕ್ಷಗಳು ಪಡೆಯುವ ನಿಧಿಯಲ್ಲಿ ಪಾರದರ್ಶಕತೆಯನ್ನು ತರುವ ಪ್ರಯತ್ನ ಇದಾಗಿದೆ. ಇದನ್ನು ದೇಶದ ಯಾವುದೇ ನಾಗರಿಕ ಅಥವಾ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳಿಂದ ಖರೀದಿಸಬಹುದು. ನಾಗರಿಕರು ಅಥವಾ ಕಾರ್ಪೊರೇಟ್‌ಗಳು ತಮ್ಮ ಆಯ್ಕೆಯ ಯಾವುದೇ ರಾಜಕೀಯ ಪಕ್ಷಕ್ಕೆ ಬಾಂಡ್ ದಾನ ಮಾಡಬಹುದು.

ಯಾವ ಪಕ್ಷಗಳು ದೇಣಿಗೆ ಪಡೆಯಬಹುದು?
ಜನತಾ ಪ್ರಾತಿನಿಧ್ಯ ಕಾಯಿದೆ 1951 ರ ಸೆಕ್ಷನ್ 29A ಅಡಿಯಲ್ಲಿ ನೋಂದಾಯಿಸಲ್ಪಟ್ಟ ಮತ್ತು ಕಳೆದ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ ಒಂದಕ್ಕಿಂತ ಹೆಚ್ಚು ಮತಗಳನ್ನು ಪಡೆದ ರಾಜಕೀಯ ಪಕ್ಷಗಳು ಈ ಬಾಂಡ್‌ಗಳನ್ನು ಪಡೆಯಬಹುದು.

ಇದರ ವಿರುದ್ಧ ಅರ್ಜಿ ಸಲ್ಲಿಸಿದವರು ಯಾರು?
ಚುನಾವಣಾ ಬಾಂಡ್‌ಗಳ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸೇರಿದಂತೆ ಒಟ್ಟು ನಾಲ್ಕು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಚುನಾವಣಾ ಬಾಂಡ್‌ಗಳು ನೀಡಿದ ಅನಾಮಧೇಯತೆಯು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯ ಮೇಲೆ ಪರಿಣಾಮ ಬೀರುತ್ತದೆ. ಮತದಾರರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.