
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ರಾಜೀನಾಮೆ ನೀಡಿದ್ದಾರೆ. ಅರುಣ್ ಗೋಯಲ್ ಅಧಿಕಾರಾವಧಿ 2027ರವರೆಗೆ ಇತ್ತು. ಸದ್ಯ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ಅವರ ದಿಢೀರ್ ರಾಜೀನಾಮೆ ರಾಷ್ಟ್ರ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ದೆಹಲಿ, ಮಾರ್ಚ್ 09: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ರಾಜೀನಾಮೆ ನೀಡಿದ್ದಾರೆ. ಅರುಣ್ ಗೋಯಲ್ ಅಧಿಕಾರಾವಧಿ 2027ರವರೆಗೆ ಇತ್ತು. ಸದ್ಯ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ಹೀಗಾಗಿ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಹೆಗಲ ಮೇಲೆ ಬಿದ್ದಿದೆ. ಗೋಯಲ್ ಅವರ ರಾಜೀನಾಮೆಯಿಂದಾಗಿ ಇದೀಗ ಚುನಾವಣಾ ಸಮಿತಿಯಲ್ಲಿ ಎರಡು ಚುನಾವಣಾ ಆಯುಕ್ತ ಸ್ಥಾನಗಳು ಖಾಲಿಯಾಗಿವೆ.

ಮುಂದಿನ ವಾರ ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ ಗೋಯಲ್ ಅವರ ರಾಜೀನಾಮೆಯಿಂದ ಚುನಾವಣಾ ದಿನಾಂಕ ಘೋಷಣೆ ಮತ್ತಷ್ಟು ಮುಂದೆ ಹೋಗಬಹುದು ಎಂದು ವರದಿ ಆಗಿದೆ.

ಅರುಣ್ ಗೋಯಲ್ ಯಾರು?
ಅರುಣ್ ಗೋಯೆಲ್ ಪಂಜಾಬ್ ಕೇಡರ್‌ಗೆ ಸೇರಿದ 1985-ಬ್ಯಾಚ್‌ನ ನಿವೃತ್ತ ಭಾರತೀಯ ಆಡಳಿತ ಸೇವಾ ಅಧಿಕಾರಿ ಆಗಿದ್ದರು. ನವೆಂಬರ್ 19, 2022 ರಂದು, ಅವರು ಭಾರತದ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ನವೆಂಬರ್ 21, 2022 ರಂದು ಅಧಿಕಾರ ವಹಿಸಿಕೊಂಡರು. ಕಾರ್ಯವಿಧಾನದ ಕಾಳಜಿಯಿಂದಾಗಿ ಅವರ ನೇಮಕಾತಿಯನ್ನು ಭಾರತೀಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ 3 ಆಗಸ್ಟ್ 2023 ರಂದು ಅನುಮತಿ ನೀಡಲಾಯಿತು.

ಅರುಣ್ ಗೋಯೆಲ್ ಅವರು ಲೋಕಸಭೆ ಚುನಾವಣೆಯ ಸಿದ್ಧತೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ವಿವಿಧ ರಾಜ್ಯಗಳಲ್ಲಿ ಸಿದ್ಧತೆ ಪರಿಶೀಲನೆಗಾಗಿ ನಿರಂತರ ಪ್ರವಾಸ ಕೈಗೊಂಡಿದ್ದರು. ಆದರೆ ಇದೇ ವಾರದ ಅಂತ್ಯದೊಳಗೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎನ್ನುವ ವರದಿಗಳ ಮಧ್ಯೆಯೇ ಅವರು ರಾಜೀನಾಮೆ ನೀಡಿದ್ದಾರೆ. ಅವರ ದಿಢೀರ್ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಇತ್ತೀಚಿಗಷ್ಟೇ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿ ಇಂಡಿಯಾ ಒಕ್ಕೂಟಕ್ಕೆ ವಿದಾಯ ಹೇಳಿತ್ತು. ಇದೀಗ ಕಾಂಗ್ರೆಸ್ ನಿನ್ನೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಕರ್ನಾಟಕದ 7 ಲೋಕಸಭಾ ಕ್ಷೇತ್ರಗಳು ಸೇರಿ ಒಟ್ಟು 39 ಕ್ಷೇತ್ರಗಳಿಗೆ ಕದನ ಕಲಿಗಳನ್ನು ಘೋಷಿಸಿದೆ.