
ಬೆಂಗಳೂರು : ರಾಜ್ಯಸಭೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ 3 ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ, ಬಿಜೆಪಿಯ ಒಬ್ಬರು ರಾಜ್ಯಸಭೆ ಪ್ರವೇಶಿಸಿದರು. ಮೈತ್ರಿ ಅಭ್ಯರ್ಥಿಗೆ ಸೋಲಾಗಿದೆ. ಗೆಲುವಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಸಂಭ್ರಮಾಚರಣೆ ವೇಳೆ ʼಪಾಕಿಸ್ತಾನ್ ಝಿಂದಾಬಾದ್ʼ ಘೋಷಣೆ ಕೂಗಿದ್ದಾರೆ ಎಂದು ಟಿವಿ ಚಾನಲ್ ಗಳು ವರದಿ ಮಾಡಿದ್ದವು. ಆದರೆ ವೀಡಿಯೊ ಕೂಲಂಕುಷವಾಗಿ ಪರಿಶೀಲಿಸಿದಾಗ ಸ್ವಷ್ಟವಾಗಿ ‘ನಾಸೀರ್ ಸಾಬ್ ಝಿಂದಾಬಾದ್’ ಎಂದು ಹೇಳುತ್ತಿರುವುದು ಕೇಳಿಸುತ್ತಿದೆ.

ಕನ್ನಡದ ಸುದ್ದಿ ಮಾಧ್ಯಮಗಳಾದ ಟಿವಿ9, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ವಿಸ್ತಾರ ನ್ಯೂಸ್, ನ್ಯೂಸ್ ಫಸ್ಟ್ ಹಾಗೂ ರಿಪಬ್ಲಿಕ್ ಕನ್ನಡ ಸೇರಿದಂತೆ ಬಹುತೇಕ ಮಾಧ್ಯಮಗಳು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿವೆ.
ನಾಸಿರ್ ಹುಸೇನ್ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾಕಿಸ್ತಾನ್ ಝಿಂದಾಬಾದ್, ಪಾಕಿಸ್ತಾನ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಪಕ್ಕದಲ್ಲಿದ್ದ ಕೆಲ ಕಾರ್ಯಕರ್ತರು ಆತನ ಬಾಯಿಮುಚ್ಚಿಸಿರುವ ವಿಡಿಯೋ ವೈರಲ್ ಆಗಿದೆ” ಎಂದು ಟಿವಿ ಚಾನಲ್ ಗಳು ಸುಳ್ಳು ಸುದ್ದಿ ಹರಡಿವೆ. ಜೊತೆಗೆ ಬಿಜೆಪಿ ನಾಯಕರಿಂದ ಪ್ರತಿಕ್ರಿಯೆಯನ್ನೂ ಕೇಳಿವೆ. ಬಿಜೆಪಿ ನಾಯಕರು
ವಿಧಾನ ಸೌಧ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ವಾಸ್ತವದಲ್ಲಿ ಅಲ್ಲಿ ನಡೆದದ್ದೇ ಬೇರೆ. ನಾಸಿರ್ ಹುಸೇನ್ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ‘ನಾಸೀರ್ ಸಾಬ್ ಝಿಂದಾಬಾದ್’ ಎಂದು ಘೋಷಣೆ ಕೂಗಿರುವುದು ಇನ್ನೊಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸಿದೆ. ಅಭಿಮಾನಿಗಳು, ಜನರು, ಪತ್ರಕರ್ತರ ಮಧ್ಯೆ ಸಂಭ್ರಮಾಚರಣೆಯಲ್ಲಿ ಹೆಚ್ಚಿನ ಗುಂಪು ಸೇರಿದ್ದರಿಂದ ಅದು ಬೇರೆಯೇ ರೀತಿಯಲ್ಲಿ ವರದಿಯಾಗಿದೆ.

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರೂ, ಈ ವೀಡಿಯೊ ವನ್ನು ಸ್ಲೋ ಮೋಷನ್ ನಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸ್ಪಷ್ಟವಾಗಿ ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗುವುದು ಕೇಳಿಸುತ್ತದೆ.
ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ , “ನಾಸೀರ್ ಸಾಬ್ ಜಿಂದಾಬಾದ್” ಎಂದು ಕೂಗುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದ್ದರು. ಮಾಧ್ಯಮಗಳು “ಪಾಕಿಸ್ತಾನ ಜಿಂದಾಬಾದ್” ಎಂದು ಕೂಗುತ್ತಿದ್ದಾರೆ ಎಂದು ಸುದ್ದಿ ಬಿತ್ತರಿಸಿ ಸಮಾಜದ ಸಾಮರಸ್ಯವನ್ನು ಕದಡುವ ಕೆಲಸ ಮಾಡುತ್ತಿದ್ದಾರೆ.
ನಾಸಿರ್ ಹುಸೇನ್ ಬೆಂಬಲಿಗರ ಘೋಷಣೆ ವಿಚಾರದ ಕುರಿತಾಗಿ ಮಾಧ್ಯಮಗಳು ಪ್ರಶ್ನೆಗೆ ನಾಸಿರ್ ಹುಸೇನ್, ‘ಏಯ್ ನಡಿಯೋ.. ಯಾವನೋ ಅವನು. ಹುಚ್ಚ ನ ಹಾಗೆ ಪ್ರಶ್ನೆ ಕೇಳಬೇಡ ಎಂದಿದ್ದಾರೆ.

ಈ ಕುರಿತು ಪ್ರಗತಿಪರ ಚಿಂತಕರಾದ ಡಾ.ವಾಸು ಅವರ ತಮ್ಮ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಈ ಮಾಧ್ಯಮಗಳನ್ನು ಯಾವ ಕಸದ ತೊಟ್ಟಿಗೂ ಹಾಕಬಾರದು.. ಕಸಕ್ಕೂ ಅಪಾಯ. ನಾಸಿರ್ ಸಾಬ್ ಜಿಂದಾಬಾದ್ ಅಂತ ಕೂಗ್ತಾ ಇರೋದು ಗೊತ್ತಿದ್ದರೂ, ಅವರ ಮನಸ್ಸಿನಲ್ಲಿ ಯಾವಾಗಲೂ ಪಾಕಿಸ್ತಾನವೇ ಇರೋದ್ರಿಂದ ಅದೇ ಕೇಳುತ್ತೆ ಎಂದು ಕಿಡಿಕಾರಿದ್ದಾರೆ.
ಮುಂದುವರೆದು, ಬಿಜೆಪಿ – ಜೆಡಿಎಸ್ ಸೋಲನ್ನ (ಅದು ಮೊದಲೇ ಸ್ಪಷ್ಟವಾಗಿತ್ತು) ಅರಗಿಸಿಕೊಳ್ಳಲಾಗದೇ ಈ ಮಟ್ಟಕ್ಕೆ ಇಳಿಯಬಾರದು. ಇನ್ನು ಇಡೀ ಬಿಜೆಪಿ ಐಟಿ ಸೆಲ್‌ಗೆ ಮೂರು ದಿನ ಇದೇ ಕೆಲಸ. ಅದರ ರಾಷ್ಟ್ರೀಯ ಮುಖ್ಯಸ್ಥ ಮಾಳವೀಯ ಅಂತೂ ಅತ್ಯಂತ ನೀಚ ಮನಸ್ಥಿತಿಯವ.
ಅಭಿವೃದ್ಧಿಯ ಹೆಸರಿನಲ್ಲಿ ಗೆದ್ದು ಬರುವ ಧೈರ್ಯ ಇರುವ ಯಾರಾದರೂ ಇಂತಹ ನೀಚ ಮಟ್ಟಕ್ಕೆ ಇಳಿಯುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
Read More: