
ಹಿಂದುತ್ವ ಸಂಘಟನೆಗಳು ವಿವಾದ ಸೃಷ್ಟಿಸಿದ್ದ ‘ಅಕ್ಬರ್ ಮತ್ತು ಸೀತಾ’ ಸಿಂಹಗಳ ಹೆಸರು ಬದಲಿಸುವಂತೆ ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ.
ತ್ರಿಪುರಾದಿಂದ ಪಶ್ಚಿಮ ಬಂಗಾಳಕ್ಕೆ ಇತ್ತೀಚೆಗೆ ತರಲಾಗಿದ್ದ ಅಕ್ಬರ್ ಮತ್ತು ಲೀಲಾ ಎಂಬ ಜೋಡಿ ಸಿಂಹಗಳನ್ನು ಒಂದೇ ಕಡೆ ಇರಿಸಲಾಗಿತ್ತು. ಇದರ ವಿರುದ್ದ ವಿಶ್ವ ಹಿಂದೂ ಪರಿಷತ್ ನ್ಯಾಯಾಲಯದ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠ, ವಿವಾದದಿಂದ ದೂರವಿರಲು ಸಿಂಹಗಳ ಹೆಸರು ಬದಲಿಸುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕ ಆದೇಶ ನೀಡಿದೆ ಎಂದು ಲೈವ್ ಲಾ ವರದಿ ಮಾಡಿದೆ.
ನೀವು ಸಿಂಹಕ್ಕೆ ಹಿಂದೂ ದೇವತೆ, ಮುಸ್ಲಿಂ ಪ್ರವಾದಿ, ಕ್ರಿಶ್ಚಿಯನ್ ದೇವರು, ಸ್ವಾತಂತ್ರ್ಯ ಹೋರಾಟಗಾರರು ಅಥವಾ ನೊಬೆಲ್ ಪ್ರಶಸ್ತಿ ವಿಜೇತರ ಹೆಸರನ್ನು ಇಡುತ್ತೀರಾ? ಸಾಮಾನ್ಯವಾಗಿ ನಮ್ಮ ದೇಶದ ಜನರು ಗೌರವಿಸುವ ಯಾರ ಹೆಸರನ್ನಾದರೂ ಇಡುತ್ತೀರಾ? ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳದ ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ತ್ರಿಪುರಾದಲ್ಲೇ ಸಿಂಹಗಳಿಗೆ ಹೆಸರು ಇಡಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಸಿಂಹಗಳಿಗೆ ಮರುನಾಮಕರಣ ಮಾಡಲು ಯೋಚಿಸುತ್ತಿದೆ ಎಂದು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.

‘ದೇವರು, ಪೌರಾಣಿಕ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಅಥವಾ ನೊಬೆಲ್ ಪ್ರಶಸ್ತಿ ವಿಜೇತರ’ ಹೆಸರುಗಳನ್ನು ಪ್ರಾಣಿಗಳಿಗೆ ಇಡುವುದರ ಹಿಂದಿನ ಕಾರಣವನ್ನು ನ್ಯಾಯಾಲಯವು ಪ್ರಶ್ನಿಸಿದೆ. ತ್ರಿಪುರ ನೀಡಿದ ಹೆಸರುಗಳನ್ನು ರಾಜ್ಯ ಏಕೆ ಪ್ರಶ್ನಿಸಲಿಲ್ಲ? ಎಂದು ಕೇಳಿದೆ.

ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಎಂದು ಮರು ವರ್ಗೀಕರಿಸಲು ನ್ಯಾಯಾಲಯವು ನಿರ್ದೇಶಿಸಿದೆ ಮತ್ತು ಪಿಐಎಲ್ಗಳನ್ನು ಆಲಿಸುವ ಸಾಮಾನ್ಯ ಪೀಠಕ್ಕೆ ಮರುನಿರ್ದೇಶಿಸಿದೆ