
ನವದೆಹಲಿ: ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು (Farmers) ಚದುರಿಸಲು ಪೊಲೀಸರು ಮತ್ತೆ ಅಶ್ರುವಾಯು ಪ್ರಯೋಗಿಸಿದ್ದಾರೆ. ಅಶ್ರುವಾಯು ಶೆಲ್ಗಳಿಂದ ಪಾರಾಗಲು ರೈತರು ಚೆಲ್ಲಾಪಿಲ್ಲಿಯಾಗಿದ್ದಾರೆ. ಇದೇ ವೇಳೆ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 63 ವರ್ಷದ ರೈತರೊಬ್ಬರು ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ.

ʻದೆಹಲಿ ಚಲೋʼ (Delhi Chalo) ರೈತರ ಪ್ರತಿಭಟನೆ ಶುಕ್ರವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಭಾರತ್ ಬಂದ್ಗೆ ಹಲವು ಸಂಘಟನೆಗಳು ಕರೆ ನೀಡಿದ್ದವು. ಸ್ಥಳದಲ್ಲಿ ಸೆಕ್ಷನ್ 144 ವಿಧಿಸಿರುವುದರಿಂದ ಪೊಲೀಸ್ ಮತ್ತು ರೈತರು ಮುಖಾಮುಖಿಗೊಂಡಿದ್ದು ಗಡಿ ದಾಟಲು ಪ್ರಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಲಾಯಿತು.


ನೋಯ್ಡಾ ಮೂಲದ ಭಾರತೀಯ ಕಿಸಾನ್ ಪರಿಷತ್ (Bharatiya Kisan Union) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡುವುದರೊಂದಿಗೆ ರೈತರು ಸ್ತಬ್ಧತೆಯನ್ನು ತೀವ್ರಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ.

ರೈತರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದರಿಂದ ರಾಷ್ಟ್ರ ರಾಜಧಾನಿಯ ಗಾಜಿಪುರ ಗಡಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತು. ಇದಕ್ಕೂ ಮುನ್ನ ಗುರುವಾರ, ಪ್ರತಿಭಟನಾನಿರತ ರೈತ ಸಂಘಗಳ ಮುಖಂಡರು ಮತ್ತು ಮೂವರು ಕೇಂದ್ರ ಸಚಿವರ ನಡುವೆ 5 ಗಂಟೆಗಳ ಮ್ಯಾರಥಾನ್ ಮಾತುಕತೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.
