
ಹಲವೆಡೆ ಗ್ರಾಮಸ್ಥರು ಪಲಾಯನ
ಇಂಫಾಲ: ಮಣಿಪುರದಲ್ಲಿ (Manipur) 2024ರ ವರ್ಷಾರಂಭದ ಮೊದಲ ದಿನದಿಂದಲೇ ಹಿಂಸಾಚಾರ ಭುಗಿಲೆದ್ದಿದೆ. ಮಂಗಳವಾರ (ಜ.30) ಮತ್ತೆ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದ ಓರ್ವ ಬಿಜೆಪಿ ಮುಖಂಡ (BJP Leader) ಸೇರಿ ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
2024ರ ವರ್ಷಾರಂಭದ ಮೊದಲ ದಿನವೇ ಮಣಿಪುರದಲ್ಲಿ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದರು. ಆ ನಂತರ ಇಲ್ಲಿನ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವೆ ಗುಂಡಿನ ಚಮಮಕಿ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಮಣಿಪುರದಲ್ಲಿ ಗುಂಡಿನ ಸುರಿಮಳೆಗೈದಿರುವುದು ಬೆಳಕಿಗೆ ಬಂದಿದೆ.

ಇಂಫಾಲದ ಪಶ್ಚಿಮ ಜಿಲ್ಲೆಯ ಕೌತ್ರುಕ್ ಗ್ರಾಮದಲ್ಲಿ ಗುಂಡಿನ ದಾಳಿ (Firing) ನಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಓಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಗುಂಡಿನ ದಾಳಿ ವೇಳೆ ಇಲ್ಲಿನ ಬಿಜೆಪಿ ಯುವಘಟಕದ ಭಾಗವಾದ ಭಾರತೀಯ ಜನತಾ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಮನೋಹರ್ಮಯುಮ್ ಬರೀಶ್ ಶರ್ಮಾ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಲ್ಲದೇ ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿ ಎರಡು ಸಮುದಾಯಗಳ ಗ್ರಾಮ ಸ್ವಯಂಸೇವಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹಿಂಸಾಚಾರದ ನಂತರ ಇಂಫಾಲ್ ಕಣಿವೆಯ ಕಡಂಗ್‌ಬಂಡ್, ಕೌಟ್ರುಕ್ ಮತ್ತು ಕಾಂಗ್‌ಚುಪ್ ಗ್ರಾಮಗಳಿಂದ ಹಲವು ನಿವಾಸಿಗಳು ಪಲಾಯನ ಮಾಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.