
ಪಟ್ನಾ: ಮಹಾಘಟಬಂಧನ್ ಮೈತ್ರಿ ತೊರೆದು ಹೋಗಿರುವ ನಿತೀಶ್ ಕುಮಾರ್ (Nitish Kumar) ವಿರುದ್ಧ ಲಾಲೂ ಪ್ರಸಾದ್ (Lalu Prasad Yadav) ಅವರ ಪುತ್ರಿ ಹಾಗೂ ಆರ್ಜೆಡಿ ನಾಯಕಿ ರೋಹಿಣಿ ಆಚಾರ್ಯ (Rohini Acharya) ಆಕ್ರೋಶ ಹೊರಹಾಕಿದ್ದಾರೆ. ನಿತೀಶ್ ಕುಮಾರ್ ಅವರನ್ನು ಕಸಕ್ಕೆ ಹೋಲಿಸಿ ಅವರು ಟ್ವೀಟ್ ಮಾಡಿದ್ದಾರೆ. `ಕಸವು ಮತ್ತೆ ಡಸ್ಟ್ಬಿನ್ಗೆ ಹೋಗಿದೆ. ಗಬ್ಬು ನಾರುವ ಕಸವನ್ನು ಪಡೆದ ಡಸ್ಟ್ಬಿನ್ಗೆ ಅಭಿನಂದನೆಗಳು’ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ಬಿಹಾರದಲ್ಲಿ (Bihar) ಮಹಾಘಟಬಂಧನ್ ಮೈತ್ರಿಯೊಂದಿಗೆ ಸಂಬಂಧವನ್ನು ಕಡಿದುಕೊಂಡು ನಿತೀಶ್ ಕುಮಾರ್ ಆರ್ಜೆಡಿ ತ್ಯಜಿಸುತ್ತಿದ್ದಂತೆ ರೋಹಿಣಿ ಅವರು ಈ ಪೋಸ್ಟ್ ಮಾಡಿದ್ದಾರೆ. ಇದೀಗ ರಾಜ್ಯದಲ್ಲಿ ಬಿಜೆಪಿ-ಜೆಡಿ(ಯು) ಸರ್ಕಾರದ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಲು ಅವರು ಸಜ್ಜಾಗಿದ್ದಾರೆ. ಈ ಮೂಲಕ ಅವರು 9ನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ.

ಲಾಲೂ ಪ್ರಸಾದ್ ಅವರ ಹಳೆಯ ಪೋಸ್ಟ್ನ್ನು ಸಹ ರೋಹಿಣಿಯವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ `ನಿತೀಶ್ ಒಂದು ಹಾವು, ಹಾವು ಪೊರೆ ಕಳಚಿದಂತೆ, ಅವರು ಸಹ ಎರಡು ವರ್ಷಕ್ಕೊಮ್ಮೆ ಪೊರೆ ಕಳಚುತ್ತಾರೆ. ಈ ಬಗ್ಗೆ ಯಾರಿಗಾದರೂ ಅನುಮಾನವಿದೆಯೇ? ಎಂದು ಬರೆಯಲಾಗಿದೆ
ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಇಂದೇ ಸಂಜೆ 5 ಗಂಟೆಗೆ ಬಿಹಾರ ಸಿಎಂ ಆಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿಯ ಇಬ್ಬರು ಉಪಮುಖ್ಯಮಂತ್ರಿಗಳೊಂದಿಗೆ ನಿತೀಶ್ ಕುಮಾರ್ 9ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಡಿಸಿಎಂ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.