
ವಿಜಯಪುರ: ಮಹಾನಗರ ಪಾಲಿಕೆ ಮೇಯರ್ ಹುದ್ದೆ ಮತ್ತೆ ಕಾಂಗ್ರೆಸ್ (Congress) ಪಾಲಾಗಿದೆ. 21ನೇ ಅವಧಿಯ ಮೇಯರ್ ಆಗಿ ಕಾಂಗ್ರೆಸ್‌ನ ಮೆಹಜಬೀನ್ ಹೊರ್ತಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗಕ್ಕೆ (General Category) ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಒಟ್ಟು 22 ಮತಗಳನ್ನು ಪಡೆದು ಮೇಯರ್ ಆಗಿ ಮಹೆಜಬೀನ್ ಹೊರ್ತಿ ಆಯ್ಕೆಯಾದರು.

10 ಕಾಂಗ್ರೆಸ್ ಸದಸ್ಯರು, ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಓರ್ವ ಜೆಡಿಎಸ್ ಸದಸ್ಯರ ಬೆಂಬಲ ಹಾಗೂ ಶಾಸಕರಾದ ಎಂಬಿ ಪಾಟೀಲ್, ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಠೋಡ್ ಮತಗಳ ಬೆಂಬಲದೊಂದಿಗೆ ಗೆಲವು ಸಾಧಿಸಿದ್ದಾರೆ.

ಬಿಜೆಪಿಯ (BJP) 17 ಸದಸ್ಯರ ಪೈಕಿ ಓರ್ವ ಬಿಜೆಪಿ ಸದಸ್ಯ ನಿಧನರಾಗಿದ್ದು, ಬಿಜೆಪಿ ಬಲ ಕುಸಿದಿತ್ತು. 16 ಸದಸ್ಯರ ಜೊತೆಗೆ ನಗರ ಶಾಸಕ ಯತ್ನಾಳ್ ಹಾಗೂ ಸಂಸದ ರಮೇಶ ಜಿಗಜಿಣಗಿ ಮತ ಸೇರಿ ಒಟ್ಟು 18 ಮತಗಳು ಮಾತ್ರ ಬಿಜೆಪಿ ಕೈಯ್ಯಲ್ಲಿತ್ತು. ಓರ್ವ ಸದಸ್ಯ ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬಾರದು ಎಂದು ಬಿಜೆಪಿ ಮನವಿ ಮಾಡಿತ್ತು.

ಉಪಮೇಯರ್ ಸ್ಥಾನ ಎಸ್‌ಟಿ ಸಮಾಜಕ್ಕೆ ಮೀಸಲಾಗಿದ್ದ ಕಾರಣ ಯಾರು ಪ್ರತಿಸ್ಪರ್ಧಿ ಇರಲಿಲ್ಲ. ಹೀಗಾಗಿ ಉಪ ಮೇಯರ್ ಆಗಿ ಕಾಂಗ್ರೆಸ್ಸಿನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾದರು
ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಬಿಜೆಪಿಯ 16 ಸದಸ್ಯರು ಹಾಗೂ ನಗರ ಶಾಸಕ ಯತ್ನಾಳ್ ಹೊರ ನಡೆದ ಪ್ರಸಂಗ ನಡೆಯಿತು. ಇದು ಅಕ್ರಮದ ಚುನಾವಣೆಯಾಗಿದ್ದು ಸರ್ಕಾರದ ಅಣತಿಯಂತೆ ಚುನಾವಣಾಧಿಕಾರಿಗಳು ನಡೆದುಕೊಂಡಿದ್ದಾರೆ. ಈ ಚುನಾವಣೆಯ ಬಗ್ಗೆ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದು ಯತ್ನಾಳ್ ಕಿಡಿಕಾರಿದರು.

ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬಿಜೆಪಿ ಮೊದಲೇ ಸೋಲು ಒಪ್ಪಿಕೊಂಡಿತ್ತು. ಎಲ್ಲರ ಸಹಾಯದಿಂದ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದೆ. ನಗರದ ಅಭಿವೃದ್ಧಿಗಾಗಿ ನಾವು ಶ್ರಮಿಸುತ್ತೇವೆ ಎಂದು ಹೇಳಿದರು. ಗೆಲವು ಸಾಧಿಸಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆಯ ಆವರಣದಲ್ಲೇ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕಾಂಗ್ರೆಸ್ ಸದಸ್ಯರು ರಾಜಹಂಸ ಬಸ್ ಮೂಲಕ ಚುನಾವಣೆಗೆ ಆಗಮಿಸಿದ್ದು ವಿಶೇಷವಾಗಿತ್ತು.