
ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿಗೆ ಪ್ರತಿಕ್ರಿಯಿಸಿದ ದಕ್ಷಿಣ ರೈಲ್ವೆ ವ್ಯವಸ್ಥಾಪಕ ಆರ್.ಎನ್.ಸಿಂಗ್, ಪ್ಲಾಟ್‌ಫಾರ್ಮ್‌ಗಳು ಮತ್ತು ಲಭ್ಯವಿರುವ ಟ್ರ್ಯಾಕ್‌ಗಳ ಕೊರತೆಯಿಂದಾಗಿ ಪ್ರಮುಖ ರೈಲುಗಳನ್ನು ಸೆಂಟ್ರಲ್ ನಿಲ್ದಾಣಕ್ಕೆ ವಿಸ್ತರಿಸುವುದು ಕಾರ್ಯಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಮಂಗಳೂರು, ಜನವರಿ 3: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ (Mangaluru Central Railway Station) ನಿರ್ಮಾಣವಾಗಿರುವ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ಕೆಲ ದಿನಗಳ ಹಿಂದಷ್ಟೇ ಲೋಕಾರ್ಪಣೆಗೊಳಿಸಲಾಗಿದೆ. ಮಂಗಳೂರು ಗೋವಾ ವಂದೇ ಭಾರತ್ ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಸಂದರ್ಭದಲ್ಲೇ, ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ಕೂಡ ಲೋಕಾರ್ಪಣೆ ಮಾಡಲಾಗಿತ್ತು. ಆದರೆ, ಪ್ರಮುಖ ರೈಲುಗಳನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ವಿಸ್ತರಿಸಿ ಪ್ರಯಾಣಿಕರಿಗೆ ನೆರವಾಗಬೇಕು ಎಂಬ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರ ಮನವಿಯನ್ನು ರೈಲ್ವೆ ಇಲಾಖೆ ತಿರಸ್ಕರಿಸಿದೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಪ್ರಮುಖ ರೈಲುಗಳನ್ನು ವಿಸ್ತರಿಸಬೇಕೆಂಬ ಬೇಡಿಕೆಯನ್ನು ದಕ್ಷಿಣ ರೈಲ್ವೆ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್, ವಾರಕ್ಕೆ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್, ವಾರಕ್ಕೊಮ್ಮೆ ಸಂಚರಿಸುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಮತ್ತು ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವಂತೆ ವಿವಿಧ ಪ್ರಯಾಣಿಕರ ಸಂಘಟನೆಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಬೇಡಿಕೆಗೆ ಅನುಗುಣವಾಗಿ ಮಂಗಳೂರು ಸೆಂಟ್ರಲ್‌ನಲ್ಲಿ ನಾಲ್ಕು ಮತ್ತು ಐದನೇ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಮಾಡಲಾಗಿದೆ. ಆದರೆ, ಪ್ಲಾಟ್‌ಫಾರ್ಮ್‌ಗಳ ಕೊರತೆ ಮತ್ತು ಖಾಲಿ ಟ್ರ್ಯಾಕ್‌ಗಳ ಕೊರತೆಯನ್ನು ಉಲ್ಲೇಖಿಸಿ ದಕ್ಷಿಣ ರೈಲ್ವೆ ಬೇಡಿಕೆಯನ್ನು ತಿರಸ್ಕರಿಸಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿಗೆ ಪ್ರತಿಕ್ರಿಯಿಸಿದ ದಕ್ಷಿಣ ರೈಲ್ವೆ ವ್ಯವಸ್ಥಾಪಕ ಆರ್.ಎನ್.ಸಿಂಗ್, ಪ್ಲಾಟ್‌ಫಾರ್ಮ್‌ಗಳು ಮತ್ತು ಲಭ್ಯವಿರುವ ಟ್ರ್ಯಾಕ್‌ಗಳ ಕೊರತೆಯಿಂದಾಗಿ ಪ್ರಮುಖ ರೈಲುಗಳನ್ನು ಸೆಂಟ್ರಲ್ ನಿಲ್ದಾಣಕ್ಕೆ ವಿಸ್ತರಿಸುವುದು ಕಾರ್ಯಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲುಗಳು ಮಂಗಳೂರು ಜಂಕ್ಷನ್‌ಗೆ ಸಂಜೆ 4.40 ಕ್ಕೆ ಆಗಮಿಸುತ್ತವೆ. ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಿದರೆ, ಇದು ಹೆಚ್ಚಿನ ಒತ್ತಡವನ್ನು ಉಂಟುಮಾಡಲಿದೆ. ಆಗಮನ, ನಿರ್ಗಮನ, ಕ್ರಾಸಿಂಗ್‌ಗಳು ಮತ್ತು ಪ್ಲಾಟ್‌ಫಾರ್ಮ್ ಕೊರತೆಯು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಜಯಪುರ ಎಕ್ಸ್‌ಪ್ರೆಸ್ ಮತ್ತು ಸಿಎಸ್‌ಟಿ ಸೂಪರ್‌ಫಾಸ್ಟ್ ರೈಲುಗಳಿಗೆ ಮಂಗಳೂರು ಜಂಕ್ಷನ್‌ನಲ್ಲಿ ಕೇವಲ ಎರಡು ಗಂಟೆ 55 ನಿಮಿಷಗಳ ನಿಲುಗಡೆ ಸಮಯ ಇದೆ. ಇದನ್ನು ವಿಸ್ತರಿಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.