
ಪ್ರಧಾನಿ ನರೇಂದ್ರ ಮೋದಿಯವರು ಕ್ರೈಸ್ತ ಸಮುದಾಯದ ಜನರೊಂದಿಗೆ ಕ್ರಿಸ್‌ಮಸ್ ಆಚರಿಸಿರುವುದನ್ನು ಮತ್ತು ಕ್ರೈಸ್ತರನ್ನು ತಲುಪಲು ಕೇರಳ ಬಿಜೆಪಿ ‘ಸ್ನೇಹಯಾತ್ರೆ’ ಹಮ್ಮಿಕೊಂಡಿರುವುದನ್ನು ಟೀಕಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಮಣಿಪುರದಲ್ಲಿ ಕ್ರೈಸ್ತ ಸಮುದಾಯದ ಜನರು ಬದುಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ” ಎಂದಿದ್ದಾರೆ.
ಸೋಮವಾರ ಎರ್ನಾಕುಲಂ ಜಿಲ್ಲೆಯ ಪಿರವಮ್‌ನಲ್ಲಿ ‘ನವ ಕೇರಳ ಸದಸ್’ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, “ಮಣಿಪುರಲ್ಲಿ ಕ್ರೈಸ್ತ ಸಮುದಾಯದ ಜನರು ಬದುಕಲಾರದಂತಹ ಪರಿಸ್ಥಿಯಿದೆ. ಕ್ರೈಸ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಸರ್ಕಾರ ಆ ಕಡೆ ತಲೆ ಹಾಕುತ್ತಿಲ್ಲ. ಮಾತನಾಡಬೇಕಾದವರು ಮೌನ ಪಾಲಿಸಿದ್ದಾರೆ. ನರಮೇಧವನ್ನು ತಡೆಯಲು ಇಚ್ಛಿಸದ ಕೆಲವು ವ್ಯಕ್ತಿಗಳು ಈಗ ವೇಷ ಧರಿಸುತ್ತಿದ್ದಾರೆ. ಸ್ನೇಹದ ನಾಟಕ ಮಾಡುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಎಲ್ಲರಿಗೂ ತಿಳಿದಿದೆ” ಎಂದಿದ್ದಾರೆ.

ಕ್ರಿಸ್‌ಮಸ್ ದಿನದಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದ ಬಿಷಪ್‌ಗಳು ವೈನ್ ಮತ್ತು ಕೇಕ್ ಅನ್ನು ಆನಂದಿಸಿದ್ದಾಗಿ ಹೇಳಿದ್ದನ್ನು ಪಿಣರಾಯಿ ವಿಜಯನ್ ಅವರ ಸಂಪುಟ ಸಹೋದ್ಯೋಗಿ ಸಾಜಿ ಚೆರಿಯನ್ ಟೀಕಿಸಿದ್ದರು. “ಬಿಷಪ್‌ಗಳು ವೈನ್, ಕೇಕ್ ಆನಂದಿಸಿದ್ದರು. ಆದರೆ, ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಿಲ್ಲ” ಎಂದು ಟೀಕಿಸಿದ ಬೆನ್ನಲ್ಲೇ ಸಿಎಂ ಹೇಳಿಕೆ ನೀಡಿದ್ದಾರೆ.

ಸಚಿವ ಸಾಜಿ ಚೆರಿಯನ್ ಟೀಕೆಯ ವಿರುದ್ದ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ಸೋಮವಾರ ಹರಿಹಾಯ್ದಿದೆ. “ಸಚಿವರ ಹೇಳಿಕೆ ಸಭ್ಯತೆಯಿಂದ ಕೂಡಿರಲಿಲ್ಲ. ಅವರು ಟೀಕೆ ಮಾಡಬಹದು. ಆದರೆ, ಈ ರೀತಿಯ ಅಸಭ್ಯ ಪದಗಳನ್ನು ಬಳಸಬಾರದಿತ್ತು” ಎಂದು ಬಿಷಪ್ಸ್ ಕೌನ್ಸಿಲ್ ಕಾರ್ಯದರ್ಶಿ ಫಾದರ್ ಜೇಕಬ್ ಪಾಲಕಪ್ಪಳ್ಳಿ ಹೇಳಿದ್ದಾರೆ.

ಕಳೆದ ವಾರ ಸಿಪಿಐ(ಎಂ) ಶಾಸಕ ಕೆ ಟಿ ಜಲೀಲ್ ಅವರು ಕೊಚ್ಚಿಯ ಕೆಸಿಬಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕ್ರಿಸ್‌ಮಸ್ ಆಚರಣೆಗೆ ಬಿಜೆಪಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ನಾಯಕರನ್ನು ಆಹ್ವಾನಿಸಿದ್ದಕ್ಕಾಗಿ ಕ್ಯಾಥೋಲಿಕ್ ಚರ್ಚ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಐಯುಎಂಎಲ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಗಳ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
