
ಮುಂಬೈ: ಮಹಾರಾಷ್ಟ್ರದ (Maharashtra) ಗ್ಲೌಸ್ ಕಾರ್ಖಾನೆಯೊಂದರಲ್ಲಿ ಭಾನುವಾರ (ಇಂದು) ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ (Fire Accident) ಆರು ಸಜೀವ ದಹನವಾಗಿರುವ ಘಟನೆ ನಡೆದಿದೆ.ಮುಂಜಾನೆ 2 ಗಂಟೆಯ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರ್ಖಾನೆಯ ಒಳಗೆ ಸಿಲುಕಿದ್ದ 6 ಜನ ಸಾವಿಗೀಡಾಗಿದ್ದಾರೆ. ಕೂಡಲೇ ಆವರಣದೊಳಗೆ ಮಲಗಿದ್ದ ಕಾರ್ಮಿಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ ವಿಷಯ ತಿಳಿಸಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಹ್ಯಾಂಡ್ ಗ್ಲೌಸ್ ತಯಾರಿಕಾ ಕಂಪನಿಯೊಂದರಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಇಡೀ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿತ್ತು. ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 6 ಜನರ ಮೃತದೇಹಗಳನ್ನ ಹೊರತೆಗೆದಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಮೋಹನ್ ಮುಂಗ್ಸೆ ತಿಳಿಸಿದ್ದಾರೆ.

ಬೆಳಗಿನ ವೇಳೆಗೆ ಬೆಂಕಿ ಹತೋಟಿಗೆ ಬಂದಿದ್ದು, ಬೆಂಕಿ ಅನಾಹುತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.