
ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಗ್ಗೆ ತಮ್ಮ ಆತಂಕವನ್ನು ಪುನರುಚ್ಚರಿಸಿದ್ದು, ಇವಿಎಂಗಳನ್ನು ಸರಿಪಡಿಸದಿದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ.
ಇವಿಎಂಗಳಲ್ಲಿ ಬಗ್ಗೆ ನಂಬಿಕೆಯ ಕೊರತೆಯಿದೆ ಎಂದು ಹೇಳಿದ ಸ್ಯಾಮ್ ಪಿತ್ರೋಡಾ, ಈ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೂ (ಇಸಿಐ) ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಚುನಾವಣಾ ಆಯೋಗದ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೆ, ಆದರೆ ಅದು ಪ್ರತಿಕ್ರಿಯಿಸದಿದ್ದಾಗ ನಾನು ಮಾತನಾಡಲು ನಿರ್ಧರಿಸಿದೆ. ಪಂಚ ರಾಜ್ಯಗಳ ಚುನಾವಣೆಗಳು ಮುಗಿದು 2024ರ ಚುನಾವಣೆ ಬರುತ್ತಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇವಿಎಂ ಬಗ್ಗೆ ನಂಬಿಕೆಯ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಈ ವರದಿಯನ್ನು ಆಧರಿಸಿ ಚುನಾವಣಾ ಆಯೋಗವು ವಿಶ್ವಾಸವನ್ನು ಪುನರ್ ನಿರ್ಮಿಸಲು ಸ್ಪಂದಿಸಬೇಕು. ಮುಂದಿನ ಚುನಾವಣೆಗೆ ಮೊದಲು ಇವಿಎಂ ಸರಿಪಡಿಸಬೇಕು. ಇವಿಎಂ ಸರಿಪಡಿಸದಿದ್ದರೆ 400 ಸ್ಥಾನಗಳು ನಿಜವಾಗಬಹುದು. ಇವಿಎಂ ಸರಿಪಡಿಸಿದರೆ ಅಷ್ಟು ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇವಿಎಂಗಳ ಪಾರದರ್ಶಕತೆ ಬಗ್ಗೆ ಪ್ರಶ್ನೆಗಳು ಹೊಸದೇನಲ್ಲ ಏಕೆಂದರೆ ವಿರೋಧ ಪಕ್ಷಗಳು ಬಿಜೆಪಿ ವಿರುದ್ದ ಹಲವಾರು ಬಾರಿ ಎಲೆಕ್ಟ್ರಾನಿಕ್ ಮತಯಂತ್ರಗಳ ದುರ್ಬಳಕೆ ಬಗ್ಗೆ ಆರೋಪಿಸಿದೆ. ಚುನಾವಣಾ ಆಯೋಗ ಈ ರೀತಿಯ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ ಮತ್ತು ರಾಜಕೀಯ ಪಕ್ಷಗಳು ತಮ್ಮ ವಾದವನ್ನು ಸಾಬೀತುಪಡಿಸುವಂತೆ ಹೇಳಿದೆ. ಬಿಜೆಪಿಯು ಈ ವಿಷಯದ ಬಗ್ಗೆ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿದ್ದು, ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಪ್ರತಿಪಕ್ಷಗಳು ಈ ರೀತಿ ಹೇಳುತ್ತಿದ್ದಾರೆ ಎಂದು ಹೇಳಿಕೊಂಡು ಬಂದಿದೆ.

ರಾಮ ಮಂದಿರದ ಬಗ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸ್ಯಾಮ್ ಪಿತ್ರೋಡಾ, ಭಾರತದ ಶೇ.60ರಷ್ಟು ಜನರು ಬಿಜೆಪಿಗೆ ಮತ ಹಾಕುವುದಿಲ್ಲ. ಆದರೆ ಪ್ರಧಾನಿ ಮೋದಿ ಎಲ್ಲರ ಪ್ರಧಾನಿಯಾಗಿದ್ದಾರೆ. ಉದ್ಯೋಗ, ಹಣದುಬ್ಬರ, ವಿಜ್ಞಾನ ಮತ್ತು ತಂತ್ರಜ್ಞಾನದಂತಹ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಹೆಚ್ಚು ಮಾತನಾಡಬೇಕು ಎಂದು ಹೇಳಿದರು.
ರಾಮ ಮಂದಿರದ ಬಗ್ಗೆ ನನ್ನ ಹೇಳಿಕೆಗಳು ತಿರುಚಲ್ಪಟ್ಟಿವೆ. ನಾನು ಧರ್ಮವು ವೈಯಕ್ತಿಕ ವಿಷಯ ಎಂದು ಹೇಳುತ್ತಿದ್ದೇನೆ. ಅದನ್ನು ಜನರಿಗೆ ಬಿಡಿ, ಜನರು ತಮಗೆ ಬೇಕಾದುದನ್ನು ಆಚರಿಸಬೇಕು. ರಾಜಕೀಯಕ್ಕೆ ಧರ್ಮವನ್ನು ಎಳೆದು ತರುವುದು ಬೇಡ ಎಂದು ಅವರು ರಾಮ ಮಂದಿರದ ಕುರಿತು ತಮ್ಮ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ರಾಮ ಮಂದಿರ ನಿಜವಾದ ಸಮಸ್ಯೆಯೋ ಅಥವಾ ಅದಕ್ಕಿಂತ ನಿರುದ್ಯೋಗ, ಹಣದುಬ್ಬರ ಸಮಸ್ಯೆಯೋ ಎಂದು ಇದಕ್ಕೂ ಮೊದಲು ಸ್ಯಾಮ್ ಪಿತ್ರೋಡಾ ಪ್ರಶ್ನಿಸಿದ್ದರು.