
ಮಂಡ್ಯ: ಆರ್‌ಎಸ್‌ಎಸ್ ಮುಖಂಡ,ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ (Najma Nazer) ನೀಡಿದ ದೂರಿನ ಅನ್ವಯ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿತ್ತು?
ಡಿಸೆಂಬರ್ 24 ರಂದು ಶ್ರೀರಂಗಪಟ್ಟಣ ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಿಕಾರಿಗಳನ್ನು ಉದ್ದೇಶಿಸಿ ಮುಸ್ಲಿಮರ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ್ದಾನೆ.
ಮಹಿಳೆಯರನ್ನು ಚುಡಾಯಿಸಿ, ಲೈಂಗಿಕವಾಗಿ ಅವಮಾನಿಸಿ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿ, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿ, ಧರ್ಮವನ್ನ ಅವಮಾನಿಸಿ, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಗಲಭೆ ನಡೆಸಿರುವ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ. ರೌಡಿಶೀಟರ್ ತೆರೆದು ಕಾನೂನು ಕ್ರಮ ತೆಗೆದುಕೊಳ್ಳುವಂತೆ ನಜ್ಮಾ ನಝೀರ್ ದೂರು ನೀಡಿದ್ದರು.

ರವಿವಾರ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ಎಂಬಾತನು “ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ಮುಸ್ಲಿಂ ಯುವಕರು ಮಾತ್ರ ಅಲ್ಲ. ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವಕ ಯುವತಿಯರನ್ನ ಲವ್ ಜಿಹಾದ್ ಮಾಡುತ್ತಿದ್ದಾರೆ. ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ?” ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಯು ಮಹಿಳೆಯರ ಖಾಸಗಿತನ, ಮಹಿಳೆಯನ್ನು ಲೈಂಗಿಕವಾಗಿ ನಿಂದಿಸುವ, ಮಹಿಳೆಯ ಮೇಲೆ ಸಾರ್ವಜನಿಕರು ಬಲಪ್ರಯೋಗಿಸುವಂತೆ ಪ್ರಚೋದಿಸುವ, ಮಹಿಳೆಗೆ ಲೈಂಗಿಕ, ಜೀವ ಬೆದರಿಕೆ ಒಡ್ಡುವ, ಮಹಿಳೆಯರ ಖಾಸಗಿ ವಿಷಯವನ್ನು ಅಶ್ಲೀಲಗೊಳಿಸುವಿಕೆ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ಬಗೆಗೆ ಅಶ್ಲೀಲವಾಗಿ ಮಾತನಾಡಿದ, ಸಾರ್ವಜನಿಕವಾಗಿ ಮಹಿಳೆಯರನ್ನು ಚುಡಾಯಿಸಿದ, ಮಹಿಳೆಯರ ಘನತೆಗೆ ಅಡ್ಡಿಯಾದ ಪ್ರಕರಣವಾದ್ದರಿಂದ ಐಪಿಸಿ ಸೆಕ್ಷನ್ 294, 354, 509, 506, ಪ್ರಕಾರ ಅಪರಾಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.