
ಮಂಗಳೂರು: ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ ಇರಿಸಲಾಗಿದೆ. ಮುಂಜಾಗ್ರತೆ ಉದ್ದೇಶದಿಂದ ಕೋವಿಡ್ ದೃಢಪಟ್ಟ ರೋಗಿಗಳಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಹಾಸಿಗೆ ಮೀಸಲಿಡಲಾಗಿದೆ.

ವೆನ್ಲಾಕ್ ನ ಒಂದು ವಾರ್ಡ್ನಲ್ಲಿ 19 ಬೆಡ್ಗಳನ್ನು ಮತ್ತು ಐಸಿಯುವಿನ ಒಂದು ಭಾಗದಲ್ಲಿ 7 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಆರ್ಟಿಪಿಸಿಆರ್ ಪ್ರಯೋಗಾಲಯದ ಮೈಕ್ರೋಬಯಾಲೊಜಿಸ್ಟ್ ಅವರನ್ನು ಮತ್ತೆ ಮಂಗಳೂರಿಗೆ ನಿಯೋಜನೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಗಳಿಗೂ ಪರೀಕ್ಷಾ ಕಿಟ್ ವಿತರಿಸಲಾಗಿದ್ದು, ಕೋವಿಡ್ ಲಕ್ಷಣವಿದ್ದವರನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಈಗಾಗಲೇ ತಾಲೂಕು ವೈದ್ಯಾಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೂ ನಿಗಾ ಇರಿಸಲು ನಿರ್ಧರಿಸಲಾಗಿದ್ದು, ಅವರಲ್ಲಿ ಕೋವಿಡ್ ಲಕ್ಷಣ ಕಂಡುಬಂದರೆ ತಪಾಸಣೆ ನಡೆಸಿ, ಮಾದರಿಯನ್ನು ಜೆನೋಮಿಕ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
331 ತಪಾಸಣೆ ಗುರಿ
ಕೇರಳದಲ್ಲಿ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕೋವಿಡ್ ತಪಾಸಣಾ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಗುರಿ ನಿಗದಿ ಮಾಡಿದೆ. ಅದರಂತೆ ಪ್ರತೀ ದಿನ 331 ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತದೆ. 100 ರ್ಯಾಪಿಡ್ ಟೆಸ್ಟ್ ಮತ್ತು 231 ಆರ್ಟಿಪಿಸಿಆರ್ ಟೆಸ್ಟ್ ನಡೆಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ “ಉದಯವಾಣಿ’ಗೆ ತಿಳಿಸಿದ್ದಾರೆ.
ಸದ್ಯ ಕೋವಿಡ್
ಪ್ರಕರಣವಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಯಾವುದೇ ಕೋವಿಡ್ ಸಕ್ರಿಯ ಪ್ರಕರಣ ಇಲ್ಲ. ಈ ತಿಂಗಳಲ್ಲಿ ವೈದ್ಯರೊಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಸದ್ಯ ಅವರು ಚೇತರಿಸಿಕೊಂಡಿದ್ದಾರೆ.
ಇಂದು ಮಹತ್ವದ ಸಭೆ
ಕೋವಿಡ್ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರಕಾರದಿಂದ ಜಿಲ್ಲಾ ಮಟ್ಟದ ಸಭೆ ನಡೆದಿದ್ದು, ಇದೀಗ ದ.ಕ. ಜಿಲ್ಲೆಯ ಮಹತ್ವದ ಸಭೆ ಡಿ. 20ರಂದು ನಡೆಯಲಿದೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಸಹಿತ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ತಪಾಸಣೆ ಸದ್ಯಕ್ಕಿಲ್ಲ
ಕೇರಳದಲ್ಲಿ ಕೋವಿಡ್ ಏರುಗತಿಯಲ್ಲಿದ್ದರೂ ಸದ್ಯಕ್ಕೆ ಈ ಬಗ್ಗೆ ಗಾಬರಿ ಬೀಳಬೇಕಾಗಿಲ್ಲ ಎಂಬ ರಾಜ್ಯ ಸರಕಾರದ ನಿರ್ಧಾರದಂತೆ ಗಡಿಭಾಗದಲ್ಲಿ ಯಾವುದೇ ತಪಾಸಣೆ ನಡೆಸಲಾಗುತ್ತಿಲ್ಲ. ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕುಗಳ ವಿವಿಧ ಗಡಿಭಾಗಗಳು, ಕೇರಳ – ಕರ್ನಾಟಕದ ಪ್ರಮುಖ ಸಂಪರ್ಕ ರಸ್ತೆಯಾದ ತಲಪಾಡಿ ಸೇರಿದಂತೆ ಎಲ್ಲ ಕಡೆಯಿಂದಲೂ ಉಭಯ ರಾಜ್ಯಗಳ ನಡುವೆ ವಾಹನಗಳು ಎಂದಿನಂತೆಯೇ ಸಂಚರಿಸುತ್ತಿವೆ.
ಮುನ್ನೆಚ್ಚರಿಕೆಗೆ ಸೂಚನೆ
ಕೇರಳದಲ್ಲಿ ಕೋವಿಡ್ ರೂಪಾಂತರಿ ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಕೋವಿಡ್ ತಪಾಸಣೆ ನಡೆಸುವಂತೆ ತಿಳಿಸಲಾಗಿದೆ. ಗಡಿ ಭಾಗದಲ್ಲಿ ಸಾರ್ವಜನಿಕ ತಪಾಸಣೆ ಇರುವುದಿಲ್ಲ. ಸದ್ಯದಲ್ಲೇ ಕೇರಳದ ಸಚಿವರ ಸಹಿತ ಕೇಂದ್ರ ಸರಕಾರದ ಸಭೆ ನಡೆಯಲಿದ್ದು, ಅಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಐಎಲ್ಐ ಮತ್ತು ಸಾರಿ ಪ್ರಕರಣಗಳಿದ್ದರೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ.
– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ದ.ಕ.