
ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಕೋರಿದ್ದ ಹಿಂದೂಗಳ ಅರ್ಜಿ ಮತ್ತು ಎಎಸ್‌ಐ ಸಮೀಕ್ಷೆ ಆದೇಶ ಪ್ರಶ್ನಿಸಿ ಮುಸ್ಲಿಮರು ಸಲ್ಲಿಸಿದ್ದ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ಇಂದು(ಡಿ.19) ತಿರಸ್ಕರಿಸಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರಿದ್ದ ಏಕ ಸದಸ್ಯ ಪೀಠ ತೀರ್ಪು ಪ್ರಕಟಿಸಿದ್ದು,1991ರ ಹಿಂದೂಗಳ ಅರ್ಜಿ ವಿಚಾರಣೆಗೆ ಅನುಮತಿ ನೀಡಿದೆ. 6 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ವಾರಣಾಸಿ ನ್ಯಾಯಾಲಯಕ್ಕೆ ಸೂಚಿಸಿದೆ.

ತಿರಸ್ಕೃತಗೊಂಡ ಮುಸ್ಲಿಮರ ಐದು ಅರ್ಜಿಗಳಲ್ಲಿ ಮೂರು ಅರ್ಜಿಗಳು 1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ನಿರ್ವಹಣೆಗೆ ಸಂಬಂಧಿಸಿವೆ. ಉಳಿದ ಎರಡು ಅರ್ಜಿಗಳು ಎಎಸ್ಐನ ಸರ್ವೆ ಆದೇಶದ ವಿರುದ್ಧವಾಗಿವೆ.
ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಲಯ, ಮಸೀದಿಯ ಆವರಣವು ಮುಸ್ಲಿಂ ಅಥವಾ ಹಿಂದೂ ಕುರುಗಳನ್ನು ಹೊಂದಿರಬಹುದು. ಆದರೆ, ಸಮಸ್ಯೆಯ ಆರಂಭ ಹಂತದಲ್ಲೇ ಅದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಜ್ಞಾನವಾಪಿ ಮಸೀದಿಯು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಅದರ ಅವಶೇಗಳ ಮೇಲೆ ಕಟ್ಟಲಾಗಿದೆ. ಅದನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ವಾರಣಾಸಿ ನ್ಯಾಯಾಲಯದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ.
ಆದರೆ, ಇದಕ್ಕೆ ಉತ್ತರ ಪ್ರದೇಶ ಸುನ್ನೀ ವಕ್ಪ್ ಮಂಡಳಿ ಮತ್ತು ಜ್ಞಾನವಾಪಿ ಮಸೀದಿ ನಿರ್ವಹಿಸಿರುವ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ವಿರೋಧ ವ್ಯಕ್ತಪಡಿಸಿದ್ದು, ಇದು 1991ರ ಆರಾಧನಾ ಸ್ಥಳಗಳ ಕಾಯಿದೆ (ವಿಶೇಷ ನಿಬಂಧನೆಗಳು) ವಿರುದ್ದವಾಗಿದೆ ಎಂದು ವಾದಿಸಿದೆ.
1991ರ ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ ಸ್ವಾತಂತ್ರ್ಯ ನಂತರ ಯಾವುದೇ ಧಾರ್ಮಿಕ ಸ್ಥಳಗಳ ರಚನೆಯನ್ನು ಅದರ ಸ್ವರೂಪದಿಂದ ಪರಿವರ್ತಿಸುವುದನ್ನು ನಿಷೇಧಿಸುತ್ತದೆ.
ಕಳೆದ ತಿಂಗಳು, ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇನ್ನೊಬ್ಬರು ನ್ಯಾಯಾಧೀಶರ ಪೀಠದಿಂದ ತನ್ನ ಪೀಠಕ್ಕೆ ವರ್ಗಾಯಿಸಿದ್ದ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ( ನಿವೃತ್ತ) ನೀಡಿದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಸಿಜೆಐ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು, ಹಿಂದಿನ ನ್ಯಾಯಾಧೀಶರು (ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ) 2021 ರಲ್ಲಿ ತೀರ್ಪನ್ನು ಕಾಯ್ದಿರಿಸಿದರೂ ಮತ್ತು ಎಪ್ಪತ್ತೈದು ವಿಚಾರಣೆಗಳನ್ನು ನಡೆಸಿದರೂ ತೀರ್ಪು ನೀಡಲಿಲ್ಲ. ಆದ್ದರಿಂದ, ಪ್ರಕರಣಗಳನ್ನು ವರ್ಗಾಯಿಸಲು ಸಿಜೆ ಅವರ ಆದೇಶವು ಸಮರ್ಥನೀಯವಾಗಿದೆ ಎಂದು ಹೇಳಿತ್ತು.
ವೈಜ್ಞಾನಿಕ ಸಮೀಕ್ಷೆ ವರದಿ ಕೋರ್ಟ್‌ಗೆ ಸಲ್ಲಿಕೆ
ಭಾರತೀಯ ಪುರಾತತ್ವ ಇಲಾಖೆಯು ವಾರಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಸೋಮವಾರ(ಡಿ.18) ಸಲ್ಲಿಸಿದೆ.
ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ವರದಿಯನ್ನು ಬಹಿರಂಗಗೊಳಿಸಲಾಗುತ್ತದೆಯೇ? ಸರ್ವೆ ಮಾಹಿತಿಯನ್ನು ಹಿಂದೂ ಪರ ಮತ್ತು ಮುಸ್ಲಿಂ ಪರ ಅರ್ಜಿದಾರರ ಜೊತೆ ಹಂಚಿಕೊಳ್ಳಲಾಗುತ್ತದೆಯೇ ಎಂಬುವುದು ಸ್ಪಷ್ಟವಾಗಿಲ್ಲ. ಮುಂದಿನ ವಿಚಾರಣೆ ಡಿ. 21ರಂದು ನಡೆಯಲಿದೆ.