
ನವದೆಹಲಿ: ಸಂಸದರ ನಿಯಾಮವಳಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ ಕಲಾಪದಿಂದ 15 ಸಂಸದರನ್ನು ಅಮಾನತುಗೊಳಸಿದ್ದಾರೆ. ಇದರಲ್ಲಿ ಐವರು ಸಂಸದರು ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಸದನಕ್ಕೆ ಅವಕಾಶ ಇಲ್ಲವೆಂದು ಸ್ಪೀಕರ್ ಆದೇಶ ಹೊರಡಿಸಿದ್ದಾರೆ.

ಸಂಸತ್‌ನಲ್ಲಿ ಆದ ಭದ್ರತಾ ಲೋಪಕ್ಕೆ ವಿಪಕ್ಷಗಳಿಂದ ಉನ್ನತ ಮಟ್ಟಕ್ಕೆ ತನಿಖೆಗೆ ಆಗ್ರಹಿಸಿ ಭಾರೀ ಗದ್ದಲ ಸೃಷ್ಟಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ಸಂಸದರಾದ ಟಿಎನ್ ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅಮಾನಾತುಗೊಂಡವರು. ಅದರಂತೆ ಡಿಎಂಕೆ ಸಂಸದರಾದ ಕೆ.ಕನಿಮೋಳಿ ಮತ್ತು ಎಸ್‌ಆರ್ ಪಾರ್ಥಿಬನ್, ಸಿಪಿಎಂ ಸಂಸದರಾದ ಪಿಆರ್ ನಟರಾಜನ್ ಮತ್ತು ಎಸ್ ವೆಂಕಟೇಶನ್ ಮತ್ತು ಸಿಪಿಐ ಸಂಸದ ಕೆ ಸುಬ್ಬರಾಯನ್ರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯಸಭೆಯಿಂದ ಟಿಎಂಸಿಯ ಡೆರೆಕ್ ಓಬ್ರಿಯಾನ್ ಸಸ್ಪೆಂಡ್ ಆಗಿದ್ದಾರೆ. ಡೆರೆಕ್ ಓಬ್ರಿಯಾನ್ಗೆ ಅಧಿವೇಶನ ಮುಗಿಯುವವರೆಗೂ ಒಳಗೆ ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.

ಡೆರೆಕ್ ಓಬ್ರಿಯಾನ್ ಸೇರಿ ಕೆಲವರು ಸದನದ ಬಾವಿಗಿಳಿದು ತಾನಾಶಾಹಿ ನಹೀ ಚಲೇಗಿ ಅಂತ ಘೋಷಣೆ ಕೂಗುತ್ತಿದ್ದರು. ಹೀಗಾಗಿ ನಿಲುವಳಿ ಮಂಡಿಸಿದ ಕೇಂದ್ರ ಸರ್ಕಾರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸಂಸತ್‌ನಲ್ಲಿ ವಿಪಕ್ಷಗಳ ಗದ್ದಲ ಹೆಚ್ಚಾಗಿದ್ದರಿಂದ ಸಂಸದರು ಸಸ್ಪೆಂಡ್ ಮಾಡಲಾಗಿದೆ. ಒಟ್ಟು 15 ಸಂಸದರು ಅಮಾನತುಗೊಂಡಿದ್ದು ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸದನವನ್ನು ನಾಳೆಗೆ ಮುಂದೂಡಲಾಗಿದೆ.
