
ಖಾಸಗಿ ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಇ-ಮೇಲ್ ಇಡೀ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಮಾಸುವ ಮೊದಲೇ ಇನ್ನೊಂದು ಬಾಂಬ್ ಬೆದರಿಕೆ ಕರೆ ಬಂದಿದೆ. ತಡರಾತ್ರಿ ಬಂದ ಅದೊಂದು ಕಾಲ್ ಇಡಿ ಪೊಲೀಸ್ ಇಲಾಖೆಯೇ ತಲೆ ಕೆಡಿಸಿಕೊಳ್ಳುವಂತೆ ಮಾಡಿತ್ತು. ಇದೀಗ ಹುಸಿ ಬಾಂಬ್ ಕರೆ ಮಾಡಿದ್ದ ಕಿಡಿಗೇಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇರಲಾರದೆ ಇರುವೆ ಬಿಟ್ಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.

ಸಮಯ ರಾತ್ರಿ 11:30.. ಇಡೀ ಸಿಲಿಕಾನ್ ಸಿಟಿ ಆಗ ತಾನೆ ನಿದ್ರೆಗೆ ಜಾರಿತ್ತು.. ಈ ವೇಳೆ ಬಂದಿದ್ದ ಅದೊಂದು ಕಾಲ್.. ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಅನಾಮಿಕನೊಬ್ಬ ಕರೆ ಮಾಡಿ ರಾಜಭವನದಲ್ಲಿ ಬಾಂಬ್ ಇಟ್ಟಿದ್ದೀನಿ, ಇನ್ನೇನು ಕೆಲವೇ ಕ್ಷಣದಲ್ಲಿ ಬ್ಲಾಸ್ಟ್ ಆಗುತ್ತೆ ಎಂದುಬಿಟ್ಟಿದ್ದ.
ಇಂಥದೊಂದು ಬೆದರಿಕೆ ಕರೆ ಬಂದಿದ್ರಿಂದ ಗಾಬರಿಗೊಂಡ ಎನ್ಐಎ ಅಧಿಕಾರಿಗಳು, ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಅಲರ್ಟ್ ಆದ ಪೊಲೀಸರ ಪಡೆ, ತಡ ರಾತ್ರಿಯೇ ರಾಜಭವನದತ್ತ ಧಾವಿಸಿದರು, ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಎಂಟ್ರಿ ಕೂಡ ಆಗಿತ್ತು. ರಾಜಭವನ ಸುತ್ತಾ ಮುತ್ತಾ ಯಾವೊಂದು ವಸ್ತುವನ್ನು ಬಿಡದೆ ಪರಿಶೀಲನೆ ನಡೆಸಿದರು. ಆದ್ರೆ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆ ಆಗಿರಲಿಲ್ಲ.

ಇತ್ತ ಕಂಟ್ರೋಲ್ ರೂಂಗೆ ಬಂದಿದ್ದ ನಂಬರ್ ಹಿಂದಿನ ಕಿಡಿಗೇಡಿಗೆ ಬಲೆ ಬೀಸಿದ್ದ NIA ಅಧಿಕಾರಿಗಳು, ಅನಾಮಿಕ ನಂಬರ್ನ್ನ ನಗರ ಪೊಲೀಸರಿಗೆ ಫಾರ್ವರ್ಡ್ ಮಾಡಿದ್ದರು. ಬಳಿಕ ನೆಟ್ ವರ್ಕ್ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದರು, ಈ ವೇಳೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಾಲ್ ಬಂದಿರೋದಾಗಿ ಲೊಕೇಶನ್ ತೋರಿಸ್ತಿತ್ತು. ಬಳಿಕ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದ ವಿಧಾನಸೌಧ ಪೊಲೀಸರು ಆರೋಪಿ ಭಾಸ್ಕರ್ ಎಂಬಾತನನ್ನ ಬಂಧಿಸಿದ್ದಾರೆ. ಇದೀಗ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿಯನ್ನ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಬೆಪ್ಪಾಗಿ ಹೋಗಿದ್ದಾರೆ.

ಬಾಂಬ್ ಕರೆ.. ಆರೋಪಿ ಅರೆಸ್ಟ್!
- ರಾಜಭವನಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ಅರೆಸ್ಟ್
- ಆರೋಪಿ ಭಾಸ್ಕರ್ ಬಂಧಿಸಿದ ವಿಧಾನಸೌಧ ಠಾಣೆ ಪೊಲೀಸರು
- ವಿಚಾರಣೆ ವೇಳೆ ಭಾಸ್ಕರ್ ಹೇಳಿದ ವಿಷಯ ಕೇಳಿ ಖಾಕಿಪಡೆ ಶಾಕ್
- ಸುಮ್ಮನೆ ಹೋಗ್ತಿದ್ದಾಗ ರಾಜಭವನ ನೋಡಿ ಹುಸಿ ಬಾಂಬ್ ಕರೆ
- ಬಾಂಬ್ ಇಟ್ಟಿದ್ದೀನಿ ಅಂತ ಕರೆ ಮಾಡಬೇಕು ಅನ್ನಿಸ್ತು, ಮಾಡ್ದೆ
- ಪೊಲೀಸರ ಎದುರು ಹುಸಿ ಬಾಂಬ್ ಕರೆ ಕಾರಣ ಬಿಚ್ಚಿಟ್ಟ ಆರೋಪಿ
- ಆರೋಪಿ ಕೋಲಾರ ಜಿಲ್ಲೆ ಮುಳಬಾಗಿಲಿನ ವಡ್ಡಳ್ಳಿ ನಿವಾಸಿ
- ಬಿ.ಕಾಂ ವ್ಯಾಸಂಗ ಮಾಡಿ ಊರಲ್ಲಿ ಕೃಷಿ ಮಾಡ್ತಿದ್ದನಂತೆ ಭಾಸ್ಕರ್
- ಮೊನ್ನೆ ರಾತ್ರಿ ಬೆಂಗಳೂರಿನಿಂದ ಊರಿಗೆ
ಖೆಡ್ಡಾಕ್ಕೆ ಬೀಳಿಸಿದ್ದೇ ರೋಚಕ!
ಗೂಗಲ್‌ನಲ್ಲಿ ಎನ್ಐಎ ನಂಬರ್ ತೆಗೆದುಕೊಂಡಿದ್ನಂತೆ ಆರೋಪಿ ಭಾಸ್ಕರ್. ಅಲ್ಲದೇ ಹುಸಿ ಬಾಂಬ್ ಕರೆ ಮಾಡಲು ಹೊಸ ಸಿಮ್ ಖರೀದಿಸಿದ್ದನಂತೆ. ಇನ್ನೂ ಸಿಮ್ ಕೊಟ್ಟವನು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ರು. ಅಷ್ಟರಲ್ಲೇ ಬಾಂಬ್ ಇಟ್ಟಿರೋದಾಗಿ ಕರೆ ಮಾಡಿದ್ದ ಭಾಸ್ಕರ್ ಮೆಜೆಸ್ಟಿಕ್ ತಲುಪಿದ್ದ. ಮೆಜೆಸ್ಟಿಕ್‌ನಿಂದ ಆಂಧ್ರಪ್ರದೇಶದ ಕಣಿಪಕ್ಕಂ ದೇವಾಲಯವನ್ನ ತಲುಪಿದ್ದ. ನಂತರ ಆತನ ನಂಬರ್‌ನ ಟವರ್ ಡಂಪ್‌ನ ಪೊಲೀಸರು ತೆಗೆದಿದ್ದಾರೆ.. ಈ ಲೊಕೇಶನ್ ಮುಖಾಂತರ ಆರೋಪಿಯ ಪತ್ತೆ ಮಾಡಿದ್ದು, ಆಂಧ್ರದ ಚಿತ್ತೂರಿನಲ್ಲಿ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

ಒಟ್ಟಾರೆ, ಇರಲಾರದೆ ಇರವೇ ಬಿಟ್ಕೊಳ್ಳೋದು ಅಂದ್ರೆ ಇದೆ ಇರ್ಬೇಕು.. ಬೆಂಗಳೂರು ನೋಡೋಕೆ ಅಂತ ಬಂದೋನು ಇಲ್ಲಿ ಸುತ್ತಾಡ್ಕೊಂಡು ಸುಮ್ಮೆ ಹೋಗಿದ್ರೆ ಸಂಕಷ್ಟ ಎದರಾಗ್ತಿರ್ಲಿಲ್ಲ. ಅದನ್ನು ಬಿಟ್ಟು ಸುಮ್ಮನೆ ಕಪಿಚೇಷ್ಠೆ ಮಾಡೋಕೆ ಹೋಗಿ ಭಾಸ್ಕರ್ ಪೊಲೀಸರ ಅತಿಥಿಯಾಗಿದ್ದಾನೆ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸರು ಆರೋಪಿಯ ವಿಚಾರಣೆ ನಡೆಸ್ತಿದ್ದಾರೆ. ಈತ ಸುಮ್ಮನೆ ಕರೆ ಮಾಡಿದ್ನೋ? ಅಥವಾ ಏನಾದ್ರೂ ಉದ್ದೇಶ ಇತ್ತೋ ಅಂತ ಪೊಲೀಸರು ತನಿಖೆಗೆ ಇಳಿದಿದ್ದಾರೆ