
ಸಿಎಂ ಅಶೋಕ್ ಗೆಹ್ಲೋಟ್ ಸತತ 2ನೇ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲರಾದಂತಿದೆ. ಸಚಿನ್ ಪೈಲಟ್ ತಮ್ಮ ಕ್ಷೇತ್ರದಲ್ಲಿ ಗೆದ್ದರೂ, ಅಧಿಕಾರ ಮರೀಚಿಕೆಯಾಗುವ ಸಂಭವವಿದೆ.
ಹೊಸದಿಲ್ಲಿ (ಡಿಸೆಂಬರ್ 3, 2023): ರಾಜಸ್ಥಾನ ವಿಧಾನಸಭೆ ಚುನಾವಣೆ ಭಾರಿ ಕುತೂಹಲ ಕೆರಳಿಸಿದ್ದು, ಒಂದೊಂದು ಎಕ್ಸಿಟ್ ಪೋಲ್‌ಗಳು ಒಂದೊಂದು ರೀತಿ ಭವಿಷ್ಯ ನುಡಿದಿದೆ. ಬಿಜೆಪಿಗೆ ಹೆಚ್ಚು ಸ್ಥಾನ, ಅಧಿಕಾರ ಎಂದು ಕೆಲ ಎಕ್ಸಿಟ್ ಪೋಲ್‌ಗಳು ಹೇಳಿದ್ದರೆ, ಕಾಂಗ್ರೆಸ್ ಅಧಿಕಾರದತ್ತ ಹೋಗಲಿದೆ ಎಂದು ಇನ್ನು ಕೆಲವು ಎಕ್ಸಿಟ್ ಪೋಲ್‌ಗಳು ಹೇಳ್ತಿವೆ. ಹಾಗೂ, ಎರಡು ಪಕ್ಷಗಳಿಗೂ ಅಧಿಕಾರ ಸಿಗದೆ ಅತಂತ್ರವಾಗ್ಬಹುದು ಎಂದೂ ಹೇಳಲಾಗ್ತಿದೆ. ಆದರೆ, ಫಲಿತಾಂಶ ಸದ್ಯ ಬೇರೆಯೇ ಹೇಳುತ್ತಿದೆ

ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ 70 ರಿಂದ 80ರ ಸನಿಹದಲ್ಲಿ ತೆವಳುತ್ತಿದೆ. ರಾಜಸ್ಥಾನ ವಿಧಾನಸಭೆಯಲ್ಲಿ 199 ಸ್ಥಾನಗಳಿದ್ದು, 100 ಹೊಡೆದರೆ ಅಧಿಕಾರ ಸಿಗುತ್ತದೆ. ಬಿಜೆಪಿ ಕನಿಷ್ಠ 100 ಸೀಟು ಗೆದ್ದರೆ ಅಧಿಕಾರ ಹಿಡಿಯಲಿದ್ದರೂ, ಸಿಎಂ ಯಾರಾಗಬಹುದು ಅನ್ನೋ ಗುಟ್ಟು ಮಾತ್ರ ಈವರೆಗೆ ಬಿಟ್ಟುಕೊಟ್ಟಿಲ್ಲ.
ಇನ್ನೊಂದೆಡೆ, ಸಿಎಂ ಅಶೋಕ್ ಗೆಹ್ಲೋಟ್ ಸತತ 2ನೇ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲರಾದಂತಿದೆ. ಈ ಮಧ್ಯೆ , ಸಚಿನ್ ಪೈಲಟ್ ತಮ್ಮ ಕ್ಷೇತ್ರದಲ್ಲೇ ಹಿನ್ನೆಡೆ ಅನುಭವಿಸುತ್ತಿದ್ದು, ಭಾರಿ ಸಂಚಲನ ಮೂಡಿಸುತ್ತಿದ್ದ, ಹಾಗೂ ಸಿಎಂ ಕನಸು ಕಾಣುತ್ತಿದ್ದ ಅವರಿಗೆ ತಮ್ಮ ಕ್ಷೇತ್ರದಲ್ಲಿ ಗೆದ್ದರೂ, ಅಧಿಕಾರ ಮರೀಚಿಕೆಯಾಗುವ ಸಂಭವವಿದೆ.

ರಾಜಸ್ಥಾನಲ್ಲಿ 5 ವರ್ಷಕ್ಕೊಮ್ಮೆ ಮತದಾರ ಸಾಮಾನ್ಯವಾಗಿ ಪಕ್ಷವನ್ನು ಬದಲಿಸುತ್ತಾರೆ. ಇದೇ ರೀತಿ, ಈ ಬಾರಿಯೂ ಕೈನಿಂದ ಅಧಿಕಾರ ಕಸಿದುಕೊಂಡು ಮರುಭೂಮಿಯಲ್ಲಿ ಕಮಲ ಅರಳಲಿದೆ ಎನ್ನುವಂತೆ ಕಾಣ್ತಿದೆ. ಕಳೆದ ಅವಧಿಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. 2018ರ ಚುನಾವಣೆಯಲ್ಲಿ ಬಿಜೆಪಿಗೆ ಶೇ 38.77 ಮತ್ತು ಕಾಂಗ್ರೆಸ್‌ಗೆ ಶೇ 39.30 ಮತ ಹಂಚಿಕೆಯಾಗಿತ್ತು.
ರಾಜಸ್ಥಾನದಲ್ಲಿ ಬಂಡಾಯವೂ ಹೆಚ್ಚು ಸದ್ದು ಮಾಡಿದ್ದು, ಎರಡೂ ಪಕ್ಷಗಳು ಗೆಲ್ಲುವ ಸ್ವತಂತ್ರ ಅಭ್ಯರ್ಥಿಗಳು ಮತ್ತು ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕ ಮಾಡ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ರಾಜಸ್ಥಾನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಂದಲೂ 40ಕ್ಕೂ ಹೆಚ್ಚು ಬಂಡಾಯಗಾರರು ಸ್ಪರ್ಧಿಸಿದ್ದರು.
ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ ಹೆಚ್ಚು ಸ್ಥಾನ ಎಂದಿದ್ದರೆ, ಮೂರು ಎಕ್ಸಿಟ್ ಪೋಲ್‌ಗಳು ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ನೀಡಿವೆ.