
ಬೆಂಗಳೂರು: ಬಿಜೆಪಿ ಶಾಸಕಾಂಗ ಸಭೆಗೂ (BJP Meeting) ಮುನ್ನ ಅಸಮಾಧಾನ ಸ್ಫೋಟಗೊಂಡಿದ್ದು, ಸಭೆಗೂ ಮುನ್ನವೇ ಇಬ್ಬರು ಶಾಸಕರು ಹೊರ ನಡೆದಿದ್ದಾರೆ.
ಹೌದು. ಹಿರಿಯ ನಾಯಕರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹಾಗೂ ರಮೇಶ್ ಜಾರಕಿಹೊಳಿ (Ramesh Jarakiholi) ಹೊರ ನಡೆದಿದ್ದಾರೆ. ಅಲ್ಲದೆ ಹೈಕಮಾಂಡ್ ನಿಲುವು ಸ್ಪಷ್ಟವಾಗುತ್ತಿದ್ದಂತೆಯೇ ಆಮೇಲೆ ಮಾತಾಡ್ತೀವಿ ಎಂದು ಹೊರ ನಡೆದ ಯತ್ನಾಳ್‍ಗೆ ರಮೇಶ್ ಜಾರಕಿಹೊಳಿಯೂ ಸಾಥ್ ನೀಡಿದರು.

ಇದಕ್ಕೂ ಮುನ್ನ ಹೈಕಮಾಂಡ್ ಸಂದೇಶ ಹೊತ್ತು ತಂದ ವೀಕ್ಷಕರ ಎದುರೇ ಶಾಸಕ ಯತ್ನಾಳ್ ಮೌನ ಮುರಿದಿದ್ದರು. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ (BY Vijayendra) ನೇಮಕಕ್ಕೆ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು. ಬ್ಲಾಕ್‍ಮೇಲ್ ತಂತ್ರಗಳಿಗೆ ಹೈಕಮಾಂಡ್ ಮಣಿಯಬಾರದು. ಕೆಲವೇ ಚೇಲಗಳ ಮಾತು ಕೇಳಿ ಕೇಂದ್ರ ನಾಯಕರು ತೀರ್ಮಾನ ಮಾಡಬಾರದು. ನಾನು ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗಲ್ಲ. ನನ್ನ ಖರೀದಿ ಮಾಡಲಾಗಲ್ಲ.. ಪ್ರತಿಪಕ್ಷದ ನಾಯಕ ಸ್ಥಾನ ಉತ್ತರ ಕರ್ನಾಟಕದವರಿಗೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ವಿಪಕ್ಷ ಸ್ಥಾನ ನೀಡದಿದ್ದರೆ ಜನ ತೀರ್ಮಾನಿಸುತ್ತಾರೆ ಎಂದು ಗುಡುಗಿದ್ದರು.
