
ಉಡುಪಿ : ದೀಪಾವಳಿ ವೇಳೆ ಉಡುಪಿ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ, ಭಾನುವಾರ ನೇಜಾರುವಿನ ತೃಪ್ತಿ ನಗರದಲ್ಲಿ ನಡೆದ ಮುಸ್ಲಿಂ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿದೆ.
ಘಟನೆ ಕುರಿತು ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಡುಪಿ ಎಸ್ಪಿ ಡಾ.ಅರುಣ್, ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ ಮಾಡಲಾಗಿದ್ದು, ಇನ್ನೊಬ್ಬರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಸೀನಾ ಮತ್ತವರ ಮೂವರು ಮಕ್ಕಳನ್ನು ಕೊಲೆ ಮಾಡಲಾಗಿದೆ. ನಾವು ತನಿಖೆ ಮಾಡಿ ಶೀಘ್ರ ಇದರ ಹಿಂದಿನ ಕಾರಣ ಪತ್ತೆ ಹಚ್ಚುತ್ತೇವೆ. ಮನೆಯೊಳಗೆ ಯಾವುದೇ ಸೊತ್ತುಗಳು ಕಳವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ನಮಗೆ ಮಾಹಿತಿ ಬಂದಿದ್ದು, ಮಾಹಿತಿ ಬಂದ ತತ್ ಕ್ಷಣ ಬಂದು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದೇವೆ. ಕೊಲೆಗೆ ಏನು ಕಾರಣ ಎಂದು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.

ರಿಕ್ಷಾದಲ್ಲಿ ಬಂದಿದ್ದ ಆರೋಪಿ
ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ಆರೋಪಿ ರಿಕ್ಷಾದಲ್ಲಿ ಬಂದಿರುವುದು ಸ್ಪಷ್ಟವಾಗಿದೆ. ಸಂತೆಕಟ್ಟೆ ಸ್ಟಾಂಡ್ ನ ರಿಕ್ಷಾ ಚಾಲಕ ಶ್ಯಾಮ್ ಹೇಳಿಕೆ ನೀಡಿದ್ದು, ಆರೋಪಿ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದ. ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದ. ದೃಢಕಾಯದ ವ್ಯಕ್ತಿ, 45ರ ಆಸುಪಾಸಿನ ವಯಸಿನವನಾಗಿದ್ದಾನೆ. ಬ್ರೌನ್ ಕಲರ್ ಅಂಗಿ ಧರಿಸಿದ್ದು, ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ. ಮನೆಯಲ್ಲಿ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದ. ಗಡಿಬಿಡಿ ಅಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದ. ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ಆಟೋ ಸ್ಟಾಂಡ್ ತಲುಪಿದ್ದ ಎನ್ನುವುದು ಸ್ಪಷ್ಟವಾಗಿದೆ.

ಆರೋಪಿ ಬೆಂಗಳೂರು ಭಾಗದ ಶೈಲಿಯ ಕನ್ನಡ ಮಾತನಾಡುತ್ತಿದ್ದು, ಮೇಲ್ನೋಟಕ್ಕೆ ಪರಿಚಯದವನೇ ಆಗಿದ್ದು ಆತನಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಇದೆ.
ಸ್ಥಳಕ್ಕೆ ಶಾಸಕ ಭೇಟಿ
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿದ್ದು, ”ಘಟನೆಯ ಬಗ್ಗೆ ಪೊಲೀಸರ ಜೊತೆ ಮಾತನಾಡಿದ್ದೇನೆ. ಕೌಟುಂಬಿಕ ವಿಚಾರ ಹಿನ್ನೆಲೆಯಲ್ಲಿ ಕೃತ್ಯ ಆಗಿರಬಹುದು ಎಂದು ಅನ್ನಿಸುತ್ತಿದೆ. ಉಡುಪಿ ಎಸ್ಪಿ ಡಾ. ಅರುಣ್ ಈಗಾಗಲೇ ತಂಡವನ್ನು ರಚನೆ ಮಾಡಿದ್ದಾರೆ. ಆರೋಪಿಯನ್ನ ಪತ್ತೆಹಚ್ಚಲು ಈಗಾಗಲೇ ಪೊಲೀಸರು ಬೆನ್ನುಬಿದ್ದಿದ್ದಾರೆ. ಈ ಕೃತ್ಯ ಬಹಳ ಬೇಸರ ತರಿಸುವಂತದ್ದು,ದೀಪಾವಳಿ ಈ ಸಂದರ್ಭದಲ್ಲಿ ಘಟನೆ ಎಲ್ಲರ ದುಃಖಕ್ಕೆ ಕಾರಣವಾಗಿದೆ.ಕುಟುಂಬದ ಬಗ್ಗೆ ಮಾಹಿತಿ ಇದ್ದೇ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ಇದೆ” ಎಂದು ಹೇಳಿದ್ದಾರೆ.

ಹತ್ಯೆಗೀಡಾದ ಯುವತಿ ಅಫ್ನಾನ್(23) ಬೆಂಗಳೂರು ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ರಾತ್ರಿಯಷ್ಟೇ ರಜೆಯಲ್ಲಿ ಉಡುಪಿಗೆ ಬಂದಿದ್ದರು. ಮನೆಯ ಯಜಮಾನ ನೂರ್ ಮಹಮ್ಮದ್ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಹಸೀನಾ(46)ಗೃಹಿಣಿಯಾಗಿದ್ದರು. ಅಯ್ನಾಝ್(21) ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಆಸಿಂ(12) ಉಡುಪಿಯಲ್ಲಿ 8ನೇ ತರಗತಿ ಓದುತ್ತಿದ್ದ.

ಏಕಾಏಕಿ ಮನೆಗೆ ನುಗ್ಗಿ ಮಾತಿನ ಚಕಮಕಿ ನಡೆಸಿದ ದುಷ್ಕರ್ಮಿ ಹಸೀನಾ, ಅಫ್ನಾನ್,ಅಯ್ನಾಝ್ ಗೆ ಮೊದಲು ಇರಿದಿದ್ದಾನೆ. ಬೊಬ್ಬೆ ಕೇಳಿ ಆಟವಾಡುತ್ತಿದ್ದ ಆಸೀಮ್ ಒಳ ಬರುತ್ತಿದ್ದಂತೆ ಆತನನ್ನೂ ಇರಿದು ಕೊಲ್ಲಲಾಗಿದೆ. ಸ್ಥಳಕ್ಕೆ ಬಂದ ಪಕ್ಕದ ಮನೆ ಯುವತಿಯನ್ನೂ ಬೆದರಿಸಿದ ದುಷ್ಕರ್ಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಅತ್ತೆಗೂ ತೀವ್ರ ತರದ ಗಾಯವಾಗಿದೆ. ಒಬ್ಬರ ಮೇಲೆ ದ್ವೇಷದಿಂದ ಸಾಕ್ಷ್ಯ ನಾಶ ಮಾಡಲು ಉಳಿದ ಮೂವರ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದ್ದು, ಪೊಲೀಸರು ನಾಲ್ಕು ತಂಡಗಳು ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.