
ನವದೆಹಲಿ: ಭಾರತದಲ್ಲಿ ಹಿಂದೂ ಧರ್ಮದ ‘ರಕ್ಷಣೆ’ಗಾಗಿ (Hinduism) ಮಾರ್ಗಸೂಚಿಗಳನ್ನು ಮಾಡಲು ನಿರ್ದೇಶನವನ್ನು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.

ಹಿಂದೂ ಧರ್ಮದ ರಕ್ಷಣೆಗೆ ನಿರ್ದೇಶನ ಕೋರಿ ಅರ್ಜಿ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಕೆ. ಕೌಲ್ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿಯನ್ನು ವಜಾ ಮಾಡಿದೆ.
ಶೈಕ್ಷಣಿಕ ಪಠ್ಯಕ್ರಮವು ನಿಮಗೆ ಬೇಕಾದುದನ್ನು ಸೇರಿಸಬೇಕೆಂದು ನೀವು ಬಯಸುತ್ತೀರಿ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೇಗಾಗುತ್ತದೆ? ನೀವು ಸರ್ಕಾರವನ್ನು ಸಂಪರ್ಕಿಸಬಹುದು. ಶೈಕ್ಷಣಿಕ ಪಠ್ಯಕ್ರಮ ಸೇರ್ಪಡೆ ನ್ಯಾಯಾಲಯದ ಜವಾಬ್ದಾರಿಯಲ್ಲ, ಅದು ಸರ್ಕಾರದ ಕೆಲಸ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಹಿಂದೂ ಧರ್ಮದ ರಕ್ಷಣೆಗಾಗಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕೇಳುತ್ತಿದ್ದೀರಿ. ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸಿ, ಕ್ರಿಶ್ಚಿಯನ್ ಧರ್ಮವನ್ನು ರಕ್ಷಿಸಿ ಎಂದು ಯಾರಾದರೂ ಹೇಳುತ್ತಾರೆ. ಹೀಗಾಗಿ ಈ ಅರ್ಜಿಗೆ ಯಾವುದೇ ಅರ್ಹತೆ ಇಲ್ಲ ಎಂದು ವಿಚಾರಣೆ ವೇಳೆ ನ್ಯಾ. ಸಂಜಯ್ ಕಿಷನ್ ಕೌಲ್ ತಿಳಿಸಿದ್ದಾರೆ

ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು (ಶುಕ್ರವಾರ) ನಡೆಯಿತು. ಪ್ರಕರಣದಲ್ಲಿ ವಾದ ಮಂಡಿಸಲು ಅರ್ಜಿದಾರರು ಖುದ್ದು ಹಾಜರಾಗಿದ್ದರು. ಅರ್ಜಿದಾರರು ಶೈಕ್ಷಣಿಕ ಪಠ್ಯಕ್ರಮವನ್ನು ಉಲ್ಲೇಖಿಸಿದಾಗ, ಪಠ್ಯಕ್ರಮವನ್ನು ರೂಪಿಸುವುದು ಸರ್ಕಾರಕ್ಕೆ ಎಂದು ಪೀಠ ತಿಳಿಸಿತು
ಅರ್ಜಿದಾರರು ತನಗೆ ಬೇಕಾದುದನ್ನು ಇತರರು ಮಾಡಬೇಕೆಂದು ಹೇಳಲು ಸಾಧ್ಯವಿಲ್ಲ. ನೀವು ಏನನ್ನಾದರೂ ಮಾಡಿದ್ದೀರಿ ಎಂದಾದರೆ, ನೀವು ಅದನ್ನು ಪ್ರಚಾರ ಮಾಡಬಹುದು. ಯಾರೂ ನಿಮ್ಮನ್ನು ತಡೆಯುವುದಿಲ್ಲ. ಆದರೆ ಎಲ್ಲರೂ ಅದನ್ನು ಮಾಡಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.