
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಹಿಂದುತ್ವ ಹೆಸರಲ್ಲಿ ಶಾಸಕ ಸುನಿಲ್ ಕುಮಾರ್ ಮೋಸ ಮಾಡಿದ್ದಾರೆ. ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿ ಸ್ಥಾಪನೆ ಮಾಡುತ್ತಿದ್ದಾರೆ. ನಕಲಿ ಪ್ರತಿಮೆ ಮಾಡಿರುವುದು ಹಿಂದುಗಳಿಗೆ, ಇಡೀ ದೇಶಕ್ಕೆ ಮಾಡಿದ ಅವಮಾನ ಎಂದು ವಾಗ್ದಾಳಿ ಮಾಡಿದ್ದಾರೆ

ಮಂಗಳೂರು, ನವೆಂಬರ್ 08: ಹಿಂದುತ್ವ ಹೆಸರಲ್ಲಿ ಶಾಸಕ ಸುನಿಲ್ ಕುಮಾರ್ ಮೋಸ ಮಾಡಿದ್ದಾರೆ. ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿ ಸ್ಥಾಪನೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಕಲಿ ಪ್ರತಿಮೆ ಮಾಡಿರುವುದು ಹಿಂದುಗಳಿಗೆ, ಇಡೀ ದೇಶಕ್ಕೆ ಮಾಡಿದ ಅವಮಾನ. ಅಕ್ರಮ ಎಂದು ಗೊತ್ತಿದ್ದರೂ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಬಂದು ಉದ್ಘಾಟನೆ ಮಾಡಿದ್ದರು ಎಂದು ಹರಿಹಾಯ್ದಿದ್ದಾರೆ.

ತರಾತುರಿಯಲ್ಲಿ ಕಾಮಗಾರಿ
ಒಟ್ಟು 11.5 ಕೋಟಿ ರೂ. ವೆಚ್ಚದಲ್ಲಿ ಪರಶುರಾಮ ಥೀಮ್ ಪಾರ್ಕ್ ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರದಲ್ಲಿಯೇ ಕಂದಾಯ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಗೋಮಾಳ ಜಾಗ ಆಗಿರುವುದರಿಂದ ಅನುಮತಿ ನೀಡಲಾಗದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಹೇಳಿದ್ದರು. ಹಾಗಿದ್ದರೂ ಸುನಿಲ್ ಕುಮಾರ್ ತರಾತುರಿಯಲ್ಲಿ ಕಾಮಗಾರಿ ನಡೆಸಿದ್ದಾರೆ. ಅನಧಿಕೃತ ಎಂದು ತಿಳಿದಿದ್ದರೂ ಅಧಿಕಾರಿಗಳಿಗೆ ಒತ್ತಡ ಹೇರಿ ಕೆಲಸ ಮಾಡಿಸಿದ್ದರು.
ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹೀಗಾಗುತ್ತಿದ್ದರೆ ಇಡೀ ಜಿಲ್ಲೆಗೆ ಬೆಂಕಿ ಹಾಕುತ್ತಿದ್ದರು. ಹಿಂದು ಸಂಘಟನೆಗಳು ಈಗ ಯಾಕೆ ಮಾತಾಡುತ್ತಿಲ್ಲ. ಪರಶುರಾಮನಿಗೆ ಅಪಮಾನ ಆಗಿಲ್ಲವೇ? ಇವತ್ತು ಅರ್ಧ ಪ್ರತಿಮೆ ಇದೆ, ಅರ್ಧ ನಕಲಿ ಅನ್ನೋದು ಸಾಬೀತಾಗಿದೆ. ಫೈಬರ್ ಮಿಕ್ಸ್ ಪ್ರತಿಮೆ ಬಗ್ಗೆ ಪ್ರಶ್ನೆ ಮಾಡದೇ ಇದ್ದರೆ ಪರಶುರಾಮನ ಶಾಪ ತಟ್ಟಲಿದೆ ಎಂದು ಹೇಳಿದ್ದಾರೆ.
ಶಾಸಕ ಸುನಿಲ್ ಕುಮಾರ್ ಅಮಾನತಿಗೆ ಆಗ್ರಹ
ನೈಜ ಹಿಂದುತ್ವ ಇದ್ದರೆ ಬಿಜೆಪಿಯಿಂದ ಸುನಿಲ್ ಅವರನ್ನು ಅಮಾನತು ಮಾಡಿ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ. ಬಜರಂಗದಳ ಸೇರಿ ಎಲ್ಲ ಹಿಂದು ಸಂಘಟನೆಗಳು, ಮಠಾಧೀಶರು ಧ್ವನಿ ಎತ್ತಬೇಕು. ನಾವು ಎಲ್ಲ ಮಠಾಧೀಶರ ಬಳಿ ಹೋಗಿ ಧ್ವನಿ ಎತ್ತಲು, ನಮ್ಮ ಹೋರಾಟಕ್ಕೆ ಬೆಂಬಲ ಕೋರುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ತನಿಖೆ ನಡೆಸಲಿದ್ದಾರೆ. ಭ್ರಷ್ಟಾಚಾರ ಎಸಗಿದ ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತ ತನಿಖೆ ಆಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹ ಮಾಡಿದ್ದಾರೆ.

ಕಂಚಿನ ಮೂರ್ತಿ ಎಂದು ಸಾಭೀತುಪಡಿಸಲು ಹೊರಟ ಬಿಜೆಪಿ ವಿರುದ್ಧ ಕೇಸ್ ದಾಖಲಾಗಿತ್ತು. ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ನೀಡಲು ಪರಶುರಾಮನ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ಬಿಜೆಪಿ ರಿಯಾಲಿಟಿ ಚೆಕ್ ಕೂಡ ಮಾಡಿತ್ತು