
ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧ 14ನೇ ದಿನಕ್ಕೆ ಕಾಲಿಟ್ಟಿದೆ. ಗಾಜಾ ಮೇಲೆ ಇನ್ನಿಲ್ಲದಂತೆ ದಾಳಿ ಮುಂದುವರೆಸಿರುವ ಇಸ್ರೇಲ್ ತಡರಾತ್ರಿ ಮತ್ತೊಂದು ಚರ್ಚ್ ಮೇಲೆ ದಾಳಿ ನಡೆಸಿದೆ. ಇತ್ತ ಗಾಜಾ ಗಡಿಯಲ್ಲಿ ಪ್ರಧಾನಿ ನೆತನ್ಯಾಹು ಸೈನಿಕರಿಗೆ ಕಿವಿಮಾತೊಂದನ್ನು ಹೇಳಿದ್ದಾರೆ

ಬಾಂಬ್ ದಾಳಿ. ಎರಡೂ ಕಡೆ ಸಾವು ನೋವು. ಮನೆಯವರನ್ನು ಕಳೆದುಕೊಂಡವರ ಆಕ್ರಂದನ. ಹಮಾಸ್ ಹಾಗೂ ಇಸ್ರೇಲ್ ಯುದ್ಧ 14ನೇ ದಿನಕ್ಕೆ ಕಾಲಿಟ್ಟಿದೆ. ಈ ಯುದ್ಧದಿಂದ ಎರಡೂ ಕಡೆಯಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇಷ್ಟಾದ್ರೂ ದಾಳಿ ಮಾತ್ರ ನಿಂತಿಲ್ಲ. ಇಸ್ರೇಲ್ ಗಾಜಾದ ಮೇಲೆ ದಾಳಿ ಮುಂದುವರೆಸಿದೆ. ಯಾವಾಗ ಬೇಕಾದ್ರೂ ಭೂಸೇನೆ ದಾಳಿ ಮಾಡಲು ಸನ್ನದ್ಧವಾಗಿದೆ. ಆದರೆ ಯುದ್ಧದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡ ಹಿನ್ನೆಲೆ ಜಗತ್ತು ಯುದ್ಧ ನಿಲ್ಲಿಸುವಂತೆ ಒತ್ತಾಯಿಸುತ್ತಿದೆ. ಈ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಅಖಾಡಕ್ಕಿಳಿದಿದ್ದಾರೆ.

ಗಾಜಾದಲ್ಲಿರುವ ಐತಿಹಾಸಿಕ ಚರ್ಚ್ ಮೇಲೆ ಇಸ್ರೇಲ್ ದಾಳಿ
ಪ್ರಪಂಚದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾದ ಗಾಜಾದಲ್ಲಿರುವ ಐತಿಹಾಸಿಕ ಚರ್ಚ್ ಆಫ್ ಸೇಂಟ್ ಪೋರ್ಫಿರಿಯಸ್ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ. ದಾಳಿ ವೇಳೆ ಕೆಲವರು ಸಾವನ್ನಪ್ಪಿದ್ರೆ ಹಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಜಾದಲ್ಲಿ ಭೂಸೇನೆಯ ದಾಳಿಗಿಂತ ಮೊದಲು ಸೈನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ನಮ್ಮೆಲ್ಲ ಶಕ್ತಿಯಿಂದ ಗೆಲ್ಲುತ್ತೇವೆ. ಇಡೀ ಇಸ್ರೇಲ್ ಜನರು ನಿಮ್ಮ ಹಿಂದೆ ನಿಂತಿದ್ದಾರೆ ಎಂದು ಹೇಳಿದ್ದಾರೆ

ಪ್ಯಾಲೆಸ್ತೈನ್ ಆಕ್ರಮಣಕ್ಕೆ ಸಿದ್ದವಿರಿ ಎಂದ ಇಸ್ರೇಲ್ ರಕ್ಷಣಾ ಸಚಿವ
ಇನ್ನು ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಗಾಜಾದ ಗಡಿಯಲ್ಲಿರುವ ಭೂ ಸೇನೆಗೆ ಪ್ಯಾಲೇಸ್ತೈನ್ ಪ್ರದೇಶ ಆಕ್ರಮಿಸಲು ತಯಾರಿರುವಂತೆ ಹೇಳಿದ್ದಾರೆ. ಯಾವಾಗಾ ಏನು ಅಂತ ಹೇಳದ ಗ್ಯಾಲಂಟ್ ಜಸ್ಟ್ ರೆಡಿಯಾಗಿರಿ ಅಂತ ಮತ್ತೊಂದು ದಾಳಿಯ ಮುನ್ಸೂಚನೆ ನೀಡಿದ್ದಾರೆ.
ಇಸ್ರೇಲ್ ದಾಳಿಗೆ ಹಮಾಸ್‌ನ ಏಕೈಕ ಮಹಿಳಾ ನಾಯಕಿ ಜಮಿಲಾ ಬಲಿ
ಇಸ್ರೇಲಿ ಸೇನೆಯು ನಿರಂತರವಾಗಿ ಪಾಲೇಸ್ತಿನ್ಹ ನ ಸಾಮಾನ್ಯ ಜನರನ್ನು ಹತ್ಯೆ ಮಾಡುತ್ತಿದೆ. ಇದೀಗ ಹಮಾಸ್‌ನ ಏಕೈಕ ಮಹಿಳಾ ನಾಯಕಿ ಜಮಿಲಾರನ್ನು ಹತ್ಯೆ ಮಾಡಿದೆ ಅಂತ ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಇವರುಹಮಾಸ್‌ನ ರಾಜಕೀಯ ಬ್ಯೂರೋದ ಕಾರ್ಯ ನಿರ್ವಹಿಸುತ್ತಿದ್ದರು.
ಪ್ಯಾಲೆಸ್ತೈನ್ಗೆ ಹರಿದುಬಂದ ನೆರವಿನ ಮಹಾಪೂರ
ಇಸ್ರೇಲ್ ದಾಳಿಯಿಂದ ಜರ್ಜರಿತವಾಗಿರುವ ಪ್ಯಾಲೇಸ್ತೈನ್ಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಯುದ್ಧದ ಕಾರಣ ಬಂದ್ ಆಗಿದ್ದ ರಫಾ ಬಾರ್ಡರ್ ಕ್ರಾಸಿಂಗ್ ಮಾರ್ಗವನ್ನು ತೆರೆಯಲು ಈಜಿಪ್ಟ್ ಒಪ್ಪಿಕೊಂಡಿದೆ. ಹೀಗಾಗಿ ಪ್ಯಾಲೇಸ್ತೈನ್ಗೆ ಮಾನವೀಯ ನೆರವು ನೀಡಲು ಮಾರ್ಗ ಸುಗಮವಾಗಿದೆ. ಇಸ್ರೇಲ್ ಮತ್ತು ಈಜಿಪ್ಟ್ ಜೊತೆ ಮಾತಾಡಿರುವ ಅಮೆರಿಕ, ರಫಾ ಗಡಿ ಮೂಲಕ ನಿತ್ಯ 20 ಟ್ರಕ್ ಆಹಾರ ಮತ್ತು ವೈದ್ಯಕೀಯ ಸಾಮಾಗ್ರಿ ಕಳಿಸಲು ಏರ್ಪಾಟು ಮಾಡಿದೆ. . ಸದ್ಯ ರಫಾ ಗಡಿಯಲ್ಲಿ ನೆರವಿನ ಸಾಮಾಗ್ರಿ ಹೊತ್ತ ನೂರಾರು ಟ್ರಕ್ ನಿಂತಿವೆ.
ಇದರ ಜೊತೆಗೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ ಜಾಯ್ ಪ್ಯಾಲೆಸ್ತೀನಿಯನ್ನರಿಗೆ ಸುಮಾರು 2.5 ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ದೊಡ್ಡವರ ಯುದ್ಧದಲ್ಲಿ ಮಕ್ಕಳು ಸಾಯಬಾರದೆಂದು ಹೇಳಿದ್ದಾರೆ.