
ಮೈಸೂರು: ಪ್ರೊ.ಕೆ.ಎಸ್ ಭಗವಾನ್ ಹೇಳಿಕೆಯನ್ನು ಖಂಡಿಸಿ ಅವರ ನಿವಾಸದ ಮುಂದೆ ಒಕ್ಕಲಿಗರು ಪ್ರತಿಭಟನೆ ನಡೆಸಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಅವರ ನಿವಾಸದ ಎದುರು ಒಕ್ಕಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎಸ್.ಭಗವಾನ್ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಒಕ್ಕಲಿಗರು, ಭಗವಾನ್ ಯಾವ ಸಮಾಜಕ್ಕೆ ಹುಟ್ಟಿದ್ದಾನೆ ಎಂದು ಮೊದಲು ಹೇಳಲಿ. ನಮಗೆ ಸಂಸ್ಕೃತಿ ಇಲ್ಲ ಎಂದು ಹೇಳಿದ್ದಾನೆ. ಭಗವಾನ್ ಬಂದು ನಮಗೆ ಸಂಸ್ಕೃತಿಯ ಬಗ್ಗೆ ಪಾಠ ಮಾಡಲಿ. ರಸ್ತೆಯಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿರುವ ಒಕ್ಕಲಿಗ ಮುಖಂಡರು, ಭಗವಾನ್ರನ್ನ ಗಡಿಪಾರು ಮಾಡುವಂತೆ ಒತ್ತಾಯ ಮಾಡಿದರು.

ನಿವಾಸ ಮುಂದೆ ಪ್ರತಿಭಟನೆ ಮಾಡುತ್ತಿರುವುದನ್ನು ತಡೆದ ಪೊಲೀಸರು ಕೆಲ ಪ್ರತಿಭಟನಾ ನಿರತರನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲ ಕಾಲ ವಾಗ್ವಾದ ಕೂಡ ನಡೆಯಿತು. ಈ ವೇಳೆ ರೌಡಿ ಭಗವಾನ್ ಎಂದು ಘೋಷಣೆ ಕೂಗಿ ಒಕ್ಕಲಿಗರು ಆಕ್ರೋಶ ಹೊರ ಹಾಕಿದರು. ಪ್ರತಿಭಟನೆ ವೇಳೆ ಕಲ್ಲು ತೂರಾಟ ಮಾಡಬಹುದು ಎಂದು ಮೊದಲೇ ಊಹಿಸಿ ಪೊಲೀಸರು ಅವರ ನಿವಾಸಕ್ಕೆ ಬಟ್ಟೆಯನ್ನು ಇಳಿ ಬಿಟ್ಟಿದ್ದರು.

ಇನ್ನು ನಿನ್ನೆ ಮೈಸೂರಿನ ಮಹಿಷ ದಸರಾದ ವೇಳೆ ಮಾತನಾಡಿದ್ದ ಪ್ರೊ. ಕೆ.ಎಸ್ ಭಗವಾನ್ ಅವರು, ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಹೇಳಿದ್ದರು. ಈ ಹೇಳಿಕೆ ಸಂಬಂಧವೇ ಇಂದು ಅವರ ನಿವಾಸದೆದರು ಒಕ್ಕಲಿಗರು ಪ್ರತಿಭಟನೆ ಮಾಡ್ತಿದ್ದಾರೆ.
