
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿದ ಆರೋಪದಲ್ಲಿ ಶಾಸಕ ಮುನಿರತ್ನ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ಹಂಗಾಮವೇ ನಡೆದಿದೆ. ವಿಧಾನಸೌಧದ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಕೂತಿದ್ದ ಶಾಸಕ ಮುನಿರತ್ನ ಅವರು ಸೀದಾ ಡಿ.ಕೆ ಶಿವಕುಮಾರ್ ಅವರ ಬಳಿಗೆ ಹೋಗಿ ಕಾಲಿಗೆ ಬಿದ್ದಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮುನಿರತ್ನ ಹಾಗೂ ಡಿ.ಕೆ ಶಿವಕುಮಾರ್ ಮಿಲನವಾಗಿದ್ದು, ಇಬ್ಬರು ನಾಯಕರ ನಡೆ, ನುಡಿ ಅಚ್ಚರಿಗೆ ಕಾರಣವಾಗಿದೆ.

ವಿಧಾನಸೌಧದಲ್ಲಿ ನಡೆಸುತ್ತಿದ್ದ ಸತ್ಯಾಗ್ರಹವನ್ನು ಕೈ ಬಿಟ್ಟ ಬಿಜೆಪಿ ಶಾಸಕ ಮುನಿರತ್ನ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ಹೋದರು. ಪೊಲೀಸರು ಅರಮನೆ ಮೈದಾನದ ಕಾರ್ಯಕ್ರಮಕ್ಕೆ ಹೋಗಲು ತಡೆದಾಗ ಮುನಿರತ್ನ ಅವರು ಆವಾಜ್ ಹಾಕಿದರು. ನಾನೊಬ್ಬ ಜನಪ್ರತಿನಿಧಿಯಾಗಿದ್ದು, ಹಕ್ಕುಚ್ಯುತಿ ಕೊಡ್ತೇನೆ ತಡೆಯಬೇಡಿ ಎಂದು ವಾಗ್ದಾಳಿ ನಡೆಿಸಿದರು. ಕೊನೆಗೆ ಪೊಲೀಸರು ಕಾರ್ಯಕ್ರಮಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ಶಾಸಕ ಮುನಿರತ್ನ ಅವರು ಕಾರ್ಯಕ್ರಮಕ್ಕೆ ಭೇಟಿ ಕೊಟ್ಟಾಗ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದರು. ಆಗ ಕಾರ್ಯಕ್ರಮದ ನಂತರ ಡಿಸಿಎಂ ಅವರನ್ನು ಭೇಟಿ ಆಗುತ್ತೇನೆ ಎಂದು ಶಾಸಕ ಮುನಿರತ್ನ ಅವರು ಸಭಿಕರ ಸಾಲಿನಲ್ಲಿ ಕುಳಿತುಕೊಂಡರು. ಕೊನೆಗೆ ಡಿ.ಕೆ ಶಿವಕುಮಾರ್ ಅವರು ವೇದಿಕೆಯಿಂದ ಹೊರಟಾಗ ಶಾಸಕ ಮುನಿರತ್ನ ಅವರು ಡಿಸಿಎಂ ಕಾಲಿಗೆ ಬಿದ್ದು ಮನವಿ ಪತ್ರ ನೀಡಿದ್ದಾರೆ.

ಶಾಸಕ ಮುನಿರತ್ನ ಅವರು ಕಾಲಿಗೆ ಬೀಳುತ್ತಿದ್ದಂತೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು ನನ್ನ ಕಾಲಿಗೆ ಬೀಳೋದು ಬೇಡ. ನಾನು ಸ್ವಾಮೀಜಿ ಅಲ್ಲ ಎಂದು ಮನವಿ ಪತ್ರ ಸ್ವೀಕರಿಸಿ ತೆರಳಿದ್ದಾರೆ. ವೇದಿಕೆಯ ಭಾಷಣದ ನಡುವೆಯೂ ಡಿಕೆ ಶಿವಕುಮಾರ್ ಅವರು ಶಾಸಕ ಮುನಿರತ್ನರನ್ನ ಕೆಣಕಿದ್ದಾರೆ. ಯಾರೋ ಡ್ರಾಮಾ ಮಾಡಲು ಬಂದಿದ್ದಾರೆ. ಡ್ರಾಮಾ ನೋಡೋಣ, ಅಶ್ವತ್ಥ್ ನಾರಾಯಣ್ ಅವರೇ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ. ಕಾರ್ಯಕ್ರಮಕ್ಕೆ ತೊಂದರೆ ಆಗೋದು ಬೇಡ. ಡ್ರಾಮಾ ಅರ್ಟಿಸ್ಟ್, ಸ್ಕ್ರಿಪ್ಟ್ ನೋಡೋಣ ಎಂದು ಮುನಿರತ್ನಗೆ ತಿರುಗೇಟು ಕೊಟ್ಟಿದ್ದರು.