
ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ಮುಹೂರ್ತ ನಿಗದಿಯಾಗಿದೆ. ಚುನಾವಣಾ ಆಯೋಗ ಪಂಚ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ ಮಾಡಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್ಗಡ ಮತ್ತು ಮಿಜೋರಾಮ್ ರಾಜ್ಯಗಳಲ್ಲಿ ಎಲೆಕ್ಷನ್ ನಡೆಯಲಿದ್ದು, ಲೋಕಸಭೆ ಚುನಾವಣೆಗೆ ಇದು ಸೆಮಿಫೈನಲ್ ಎಂದೇ ಬಿಂಬಿತವಾಗಿದೆ.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಲೋಕಸಭೆಗೆ ಸೆಮಿಫೈನಲ್ ಆಗಿರುವ ಐದು ರಾಜ್ಯಗಳ ದಿನಾಂಕವನ್ನ ಚುನಾವಣಾ ಆಯೋಗ ಪ್ರಕಟಿಸಿದೆ. ಮೂರು ಹಿಂದಿ ಹಾರ್ಟ್ಲ್ಯಾಂಡ್ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಛತ್ತೀಸಘಡವಾದ್ರೆ, ಇನ್ನೊಂದು ದಖ್ಖನ್ ಭೂಮಿಯ ತೆಲಂಗಾಣ, ಮತ್ತೊಂದು ಸಪ್ತ ಸುಂದರಿಯರ ನಾಡು ಮೀಜೋರಾಂನಲ್ಲಿ ಮತ ಕದನ ನಡೆಯಲಿದೆ.

ಮೋದಿ ಅಲೆ, ರಾಹುಲ್ ಗಾಂಧಿಯ ಮೊಹಬ್ಬತ್ ಕೀ ದುಖಾನ್, ಗುಲಾಬಿ ಕಾರಿನ ಗುಂಗಿನಲ್ಲಿರುವ ಕೆಸಿಆರ್ಗೆ ಇದು ಅಗ್ನಿ ಪರೀಕ್ಷೆ. ಕರ್ನಾಟಕ, ಹಿಮಾಚಲ ಗೆದ್ದ ಬಳಿಕ ಜೋಶ್ಲ್ಲಿರುವ ಹಸ್ತಪಡೆಗೆ ಚೆಕ್ಮೆಟ್ ಇಡಲು ಕಮಲ ಸೇನೆ ಸರ್ವಸನ್ನದ್ಧವಾಗಿದೆ. ಈ ಬೆನ್ನಲ್ಲೇ ಪಂಚರಾಜ್ಯಗಳಲ್ಲಿ ಪ್ರತಿಷ್ಠೆಯ ಪಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣೆಗೆ ಪೌರೋಹಿತ್ಯ ವಹಿಸಿರುವ ಆಯೋಗ, ನವೆಂಬರ್ 7ರಿಂದ ಮತದಾರನ ಮಹಾ ತೀರ್ಪಿಗೆ ಕಾಲ ನಿಗದಿ ಪಡಿಸಿದೆ. ನವೆಂಬರ್ 7ರಿಂದ ಮತದಾನ ಆರಂಭವಾಗಲಿದ್ದು, ಡಿಸೆಂಬರ್ 3ರಂದು ಐದೂ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಅಷ್ಟಕ್ಕೂ ಯಾವ ರಾಜ್ಯಗಳಲ್ಲಿ ಯಾವ ದಿನ ಚುನಾವಣೆ ನಡೆಯಲಿದೆ.

ಮಿಸೋರಾಂನಲ್ಲಿ ಒಂದೇ ಹಂತದಲ್ಲಿ ನವೆಂಬರ್ 7ರಂದು ಮತದಾನ ನಡೆದರೆ, ಛತ್ತೀಸ್ಗಢ್ದಲ್ಲಿ ಎರಡು ಹಂತಗಳ ಎಲೆಕ್ಷನ್ ನಿಗದಿಯಾಗಿದೆ. ನವೆಂಬರ್ 7 ಮತ್ತು ನವೆಂಬರ್ 17ರಂದು ನಕ್ಸಲ್ ಪೀಡಿತ ಛತ್ತೀಸ್ಗಢ್ನಲ್ಲಿ ಚುನಾವಣೆ ನಡೆಯಲಿದೆ. ಉಳಿದಂತೆ, ಮಧ್ಯ ಪ್ರದೇಶದಲ್ಲಿ ನವೆಂಬರ್ 17, ರಾಜಸ್ಥಾನದಲ್ಲಿ ನವೆಂಬರ್ 23, ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾರ ತನ್ನ ಆಯ್ಕೆಯ ಸರ್ಕಾರ ಚುನಾಯಿಸಲಿದ್ದಾನೆ. ಐದು ರಾಜ್ಯಗಳ ಮತದಾರರು ಬರೆದ ತೀರ್ಪು ಡಿಸೆಂಬರ್ 3ರಂದು ಏಕಕಾಲಕ್ಕೆ ಪ್ರಕಟವಾಗಲಿದೆ. ಚುನಾವಣೆ ಘೋಷಣೆಯಾಗಿರುವ ರಾಜ್ಯಗಳು ಒಟ್ಟು 940 ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಹಾಕಲಾಗಿದೆ. ಐದು ರಾಜ್ಯಗಳಲ್ಲಿ ಸುಮಾರು 60 ಲಕ್ಷ ಜನರು 18-19 ವರ್ಷದೊಳಗಿನವರಿದ್ದು, ಮೊದಲ ಬಾರಿ ಮತದಾನ ಮಾಡಲಿದ್ದಾರೆ.

ಮಧ್ಯಪ್ರದೇಶ 230 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದ್ದು, 2018ರಲ್ಲಿ ಕಾಂಗ್ರೆಸ್ 114 ಹಾಗೂ ಬಿಜೆಪಿ 109 ಸ್ಥಾನ ಗೆದ್ದಿತ್ತು. 2020ರಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಯಿತು. ಇತ್ತ, ರಾಜಸ್ಥಾನ 200 ಕ್ಷೇತ್ರಗಳನ್ನ ಹೊಂದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 99 ಹಾಗೂ ಬಿಜೆಪಿ 73 ಸ್ಥಾನ ಗೆದ್ದಿತ್ತು. ತೆಲಂಗಾಣದಲ್ಲಿ 119 ಕ್ಷೇತ್ರಗಳಿದ್ದು, BRS ಭರ್ಜರಿ 88 ಸ್ಥಾನ ಗೆದ್ದು 2ನೇ ಬಾರಿ ಅಧಿಕಾರ ಹಿಡಿದಿತ್ತು. ಛತ್ತಿಸ್ಗಢದಲ್ಲಿ ಒಟ್ಟು 90 ಕ್ಷೇತ್ರಗಳಿದ್ದು, ಈ ಪೈಕಿ ಕಾಂಗ್ರೆಸ್ 68 ಸ್ಥಾನ ಗೆದ್ದು ಬಿಜೆಪಿಗೆ ಶಾಕ್ ನೀಡಿತ್ತು. ಮಿಜೋರಾಮ್ 40 ಕ್ಷೇತ್ರಗಳಲ್ಲಿ ಮಿಜೊ ನ್ಯಾಷನಲ್ ಫ್ರಂಟ್ 26 ಕ್ಷೇತ್ರ ಗೆದ್ದು ಮತ್ತೊಮ್ಮೆ ಅಧಿಕಾರ ಸ್ಥಾಪಿಸಿತ್ತು. ಒಟ್ಟಾರೆ, 5 ರಾಜ್ಯಗಳ 679 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಸರಿ ಸುಮಾರು 16 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ಜನರ ನಾಡಿಮಿಡಿತ ಗೊತ್ತಾಗಲಿದೆ.
