
ಪ್ರವಾಸಿಗರ ಸ್ವರ್ಗದಂತಿದ್ದ ಸಿಕ್ಕಿಂ ರಾಜ್ಯ ಮೇಘಸ್ಫೋಟ ಕ್ಕೆ ನರಳಿಹೋಗಿದೆ. ಮೇಘಸ್ಪೋಟದ ಕರಾಳತೆಗೆ ಸಿಕ್ಕಿಂನಲ್ಲಿ ಸ್ಮಶಾನ ಮೌನ ಆವರಿಸಿದೆ. ಭಾರತದ ರಕ್ಷಣೆಗೆ ಗಡಿಯಲ್ಲಿ ಗನ್ ಹಿಡಿದು ನಿಂತಿದ್ದ ಯೋಧರನ್ನೂ ಪ್ರವಾಹ ಪರಿತಪ್ಪಿಸುವಂತೆ ಮಾಡಿದೆ. ಪ್ರವಾಹದ ರೌದ್ರರೂಪಕ್ಕೆ ಸಿಕ್ಕಿಂನಲ್ಲಿ ಸಂಕಷ್ಟಗಳ ಸರಮಾಲೆಯೇ ಸೃಷ್ಟಿಯಾಗಿದೆ.
ಮನುಕುಲವನ್ನ ತನ್ನೊಡಲಲ್ಲಿ ಸಾಕಿ ಸಲಹೋ ಪೃಕೃತಿ ಮುನಿದರೆ ಎಂಥೆತಾ ಪ್ರಕೋಪಗಳು ಸೃಷ್ಟಿಯಾಗ್ಬೋದು. ಅಂತದೊಂದು ರಣಭೀಕರ ಪ್ರಕೋಪಕ್ಕೆ ಸಿಕ್ಕಿಂ ಸಾಕ್ಷಿಯಾಗಿ ನಿಂತಿದೆ. ಪದೇ ಪದೇ ಮುನಿವ ಪ್ರಕೃತಿ ಯ ವಕ್ರದೃಷ್ಟಿಯಿಂದ ತತ್ತರಿಸೋ ಸಿಕ್ಕಿಂ ಜನ ನಿನ್ನೆ ಅಕ್ಷರಶಃ ನಡುಗಿಹೋಗಿದ್ದಾರೆ. ಮೇಘಸ್ಪೋಟದ ಹೊಡೆತಕ್ಕೆ ಮುಳುಗಿ ಹೋಗಿರೋ ಸಿಕ್ಕಿಂನಲ್ಲಿ ಸ್ಮಶಾನ ಮೌನ ಆವರಿಸಿದೆ.

ಮೇಘಸ್ಪೋಟದಿಂದ ಉಂಟಾದ ದಿಢೀರ್ ಪ್ರವಾಹದಿಂದ ಉತ್ತರ ಸಿಕ್ಕಿಂನ ಲೋನಾಕ್ ಸರೋವರ ತುಂಬಿ ಹರಿಯುತ್ತಿದೆ. ಸರೋವರದ ನೀರು ಹಠಾತ್ ಲಗ್ಗೆ ಇಟ್ಟ ಪರಿಣಾಮ ಸಿಕ್ಕಿಂನ ಪ್ರಮುಖ ನದಿಯಾದ ತೀಸ್ತಾ ಸೇರಿದಂತೆ ಹಲವು ಉಪನದಿಗಳು ಉಗ್ರರೂಪ ತಾಳಿವೆ. ತೀಸ್ತಾನದಿಯ ಭೋರ್ಗರೆತಕ್ಕೆ ನದಿ ತೀರದ ಜನರ ಬದುಕು ಕೊಚ್ಚಿಹೋಗಿದೆ. ಪ್ರವಾಹದ ನಂತರ ಚುಂಗ್‌ಥಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ್ದರಿಂದ ಕೆಳಭಾಗದ ಪ್ರದೇಶಗಳು ಮುಳುಗಡೆಯಾಗಿವೆ.

ಸಿಕ್ಕಿಂನಲ್ಲಿ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಉಂಟಾದ ಪ್ರವಾಹದಿಂದ ಗಡಿಯಲ್ಲಿ ನಿಯೋಜಿಸಿದ್ದ 23 ಸೇನಾ ಸಿಬ್ಬಂದಿ ಹಾಗೂ 82 ಮಂದಿ ನಾಗರೀಕರು ನಾಪತ್ತೆಯಾಗಿದ್ರು. ನಾಪತ್ತೆಯಾದ ಯೋಧರ ರಕ್ಷಣೆಗೆ ಕಾರ್ಯಾರಣೆಗಿಳಿದ ಸೇನಾ ಪಡೆ ಓರ್ವ ಯೋಧನನ್ನ ರಕ್ಷಣೆ ಮಾಡಿದೆ. ಇನ್ನುಳಿದ 22 ಮಂದಿ ಸೈನಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಪ್ರವಾಹದ ಕೆಸರಿನಲ್ಲಿ ಹುದುಗಿಹೋಗಿರೋ ಸೇನಾ ವಾಹನಗಳನ್ನ ಜೆಸಿಬಿಗಳ ಮೂಲಕ ಪತ್ತೆಹಚ್ಚಲಾಗಿದೆ.
ಸಿಕ್ಕಿಂನಲ್ಲಿ ಮೇಘಸ್ಪೋಟದಿಂದ ಉಂಟಾದ ಹಠಾತ್ ಪ್ರವಾಹ 14 ಸೇತುವೆಗಳನ್ನ ಜಖಂಗೊಳಿಸಿದೆ. ಪ್ರವಾಹದಿಂದ 3,000 ಕ್ಕೂ ಹೆಚ್ಚು ಪ್ರವಾಸಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಶಂಕೆ ಇದೆ. 9 ಬಾರ್ಡರ್ ರೋಡ್ಸ್, 5 ರಾಜ್ಯ ಹೆದ್ದಾರಿ ಕುಸಿತವಾಗಿವೆ. ಚುಂಗ್‌ಥಾಂಗ್‌ನ ತೀಸ್ತಾ ಸ್ಟೇಜ್ 3 ಅಣೆಕಟ್ಟಿನ 14 ಕಾರ್ಮಿಕರು ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಪ್ರವಾಹದ ಅಬ್ಬರಕ್ಕೆ ಸಿಲುಕಿ ಗಾಯಗೊಂಡ 25ಕ್ಕೂ ಹೆಚ್ಚು ಜನರನ್ನ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಚುಂಗ್‌ಥಾಂಗ್‌ನಲ್ಲಿರುವ ಪೊಲೀಸ್ ಠಾಣೆ ಸಹ ಪ್ರವಾದಲ್ಲಿ ಕೊಚ್ಚಿಹೋಗಿದೆ.

ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ಗಡಿಯಲ್ಲಿ ತೀಸ್ತಾ ನದಿಯ ಅಬ್ಬರಿಂದ ಸಿಂಥಮ್ ಕಾಲುವೆ ಕುಸಿದಿದೆ.. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.. ಪಶ್ಚಿಮ ಬಂಗಾಳದಿಂದ ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 10ರ ಹಲವು ಭಾಗಗಳು ಕೊಚ್ಚಿ ಹೋಗಿವೆ.

ಒಟ್ನಲ್ಲಿ ಸಿಕ್ಕಿಂನಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿದೆ. ನಾಪತ್ತೆಯಾದವರ ಪತ್ತೆಗೆ ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ. ಪ್ರವಾಹದಿಂದ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಸಿಕ್ಕಿಂ ಸರ್ಕಾರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ. ಮಳೆ ಹೀಗೆ ಮುಂದುವರಿದ್ರೆ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆಯೂ ಇದೆ.