
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಿಂದೂ ಮಹಾ ಮಂಡಳಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಬಾಗಿಲಿಗೆ ಆರತಿ ಬೆಳಗಿ ಜೈಶ್ರೀರಾಮ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಗಂಗಾವತಿ ನಗರ ಪೊಲೀಸರು ಐವರ ವಿರುದ್ಧ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಯಮನೂರ ರಾಠೋಡ್, ಶ್ರೀಕಾಂತ ಹೊಸಕೇರಿ, ಕುಮಾರ ಹೂಗಾರ, ಚೆನ್ನಬಸವ ಹೂಗಾರ ಹಾಗೂ ಸಂಗಮೇಶ ಅಯೋಧ್ಯ ವಿರುದ್ಧ ಗಂಗಾವತಿ ನಗರ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಸೆ.28ರಂದು ಹಿಂದೂ ಮಹಾ ಮಂಡಳಿಯ ಗಣಪತಿ ವಿಸರ್ಜನೆ ಮೆರವಣಿಗೆ ಜಾಮಿಯಾ ಮಸೀದಿ ಬಳಿ ಬರುತ್ತಿದ್ದಂತೆ ಮಸೀದಿ ಬಾಗಿಲಿಗೆ ಆರತಿ ಬೆಳಗಿದ್ದಾರೆ. ಗಲಭೆ ಮಾಡುವ ಉದ್ದೇಶದಿಂದ ಜೈಶ್ರೀರಾಮ್, ಭಾರತ ಮಾತಾಕೀ ಜೈ ಎನ್ನುವ ಘೋಷಣೆಗಳನ್ನು ಕೂಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ ಕುಮಾರ ಹೂಗಾರ ಎಂಬವರು ಮಸೀದಿಯ ಬಾಗಿಲಿಗೆ ಆರತಿ ಮಾಡುತ್ತಾ ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಹಂಚಿಕೊಂಡು ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆದು ವೈರಲ್ ಮಾಡಿದ್ದಾರೆ.

ಈ ಬಗ್ಗೆ ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ಆರೋಪದಡಿ ಪೊಲೀಸರು ಐವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
