
ಬೆಂಗಳೂರು: ಶಿವಮೊಗ್ಗದಲ್ಲಿ (Shivamogga) ನಡೆದಿರುವುದು ಕೋಮುಗಲಭೆಯಲ್ಲ (Communal Violence), ಯಾರೋ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಈ ರೀತಿ ಮಾಡಿದ್ದಾರೆ. ಉಳಿದ ಎಲ್ಲಾ ಕಡೆ ಹಬ್ಬ ಚೆನ್ನಾಗಿಯೇ ಆಗಿದೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಹಾಗೂ ಈದ್ ಮಿಲಾದ್ ಎರಡು ಒಂದೇ ದಿನ ಇತ್ತು. ಈ ಬಗ್ಗೆ ಸಭೆ ಮಾಡಿದ್ದೆವು. ಈ ವೇಳೆ ಮುಸ್ಲಿಂ ಬಾಂಧವರು ಭಾನುವಾರ ಮೆರವಣಿಗೆ ಮಾಡುವುದಾಗಿ ಹೇಳಿದ್ದರು. ಇಲ್ಲಿ ಒಂದೇ ರಸ್ತೆಯಲ್ಲಿ ಮೆರವಣಿಗೆ ಆಗುತ್ತದೆ. ಈ ವೇಳೆ ಹಿಂದೂ ಹಬ್ಬ ಆದರೆ ಮುಸ್ಲಿಮರು ಹೋಗ್ತಾರೆ. ಹಾಗೆಯೇ ಮುಸ್ಲಿಮರ ಹಬ್ಬ ಆದರೆ ಹಿಂದೂಗಳು ಹೋಗುತ್ತಾರೆ. ಈ ವೇಳೆ ಯಾರೋ ಒಂದೆರಡು ಜನ ಕಿಡಿಗೇಡಿಗಳು ಈ ರೀತಿ ಗಲಾಟೆ ಮಾಡಿದ್ದಾರೆ. ಮನೆಗಳಿಗೂ ನುಗ್ಗಿ ಗಲಭೆ ಮಾಡಿದ್ದಾರೆ. ಈ ರೀತಿ ಬರೀ ರಾಗಿಗುಡ್ಡದಲ್ಲಿ ಮಾತ್ರ ನಡೆದಿದೆ ಎಂದು ಅವರು ಹೇಳಿದ್ದಾರೆ.

ಗಲಾಟೆ ಮಾಡಲು ಹೊರಗಡೆಯಿಂದ ಬಂದಿದ್ದರು ಎಂದು ಸ್ಥಳೀಯ ಶಾಸಕರು ಹೇಳುತ್ತಿದ್ದಾರೆ. ಈ ರೀತಿ ಪ್ರಚೋದನಾಕಾರಿ ಹೇಳಿಕೆಗಳನ್ನು ಯಾರೂ ಕೊಡಬಾರದು. ಅವರಿಗೆ ಈ ಮಾಹಿತಿ ಗೊತ್ತಿದೆಯಾ? ನಾನು ಎಲ್ಲಾ ವಿಚಾರದಲ್ಲೂ ರಾಜಕೀಯ ಮಾತಾಡಲು ಹೋಗುವುದಿಲ್ಲ. ಈ ರೀತಿ ಮಾತಾಡಲು ಖುಷಿ ಆಗುತ್ತದೆಯೇ? ಈ ರೀತಿ ಮಾತನಾಡಲು ಮನಸ್ಸಿಗೆ ಬೇಜಾರಾಗುತ್ತದೆ. ಹಬ್ಬ ಎಂದರೆ ಭಕ್ತಿ ಹಾಗೂ ಸಂಪ್ರದಾಯ ಅವುಗಳಿಗೆ ಗೌರವ ಕೊಡಬೇಕು ಎಂದಿದ್ದಾರೆ.

ಸ್ಥಳೀಯ ಶಾಸಕರು ಕಾರ್ ನಂಬರ್ ಬಗ್ಗೆ ಮಾತಾಡುತ್ತಿದ್ದಾರೆ. ಅವರಿಗೆ ಎಲ್ಲಾ ಮಾಹಿತಿ ಬಂದಿದೆಯೇ? ಹಿಂದೆ ಇದೆಲ್ಲ ಮಾಡಿ ಅನುಭವ ಇದೆಯಂತಾ ಅವರಿಗೆ? ಜವಾಬ್ದಾರಿ ಸ್ಥಾನದಲ್ಲಿ ಇರುವವರು ಹಾಗೆಲ್ಲ ಮಾತನಾಡಬಾರದು. ಟಿಪ್ಪು ಫೋಟೋ ಇರುವುದೇ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಅದಕ್ಕೆಲ್ಲ ಈಗ ಉತ್ತರ ಕೊಡಲು ಆಗುವುದಿಲ್ಲ ಎಂದಿದ್ದಾರೆ.
