
ಹೈದರಾಬಾದ್: ಭಾರತದ ಆತಿಥ್ಯದಲ್ಲಿ ಇದೇ ಅಕ್ಟೋಬರ್ 5 ರಿಂದ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ಪಾಕಿಸ್ತಾನ ಕ್ರಿಕೆಟ್ ತಂಡ ಬುಧವಾರ ತಡರಾತ್ರಿ ಹೈದರಾಬಾದ್ಗೆ ಬಂದಿಳಿದಿದೆ. ಈ ವೇಳೆ ಪಾಕಿಸ್ತಾನ ತಂಡದ ಆಟಗಾರರಿಗೆ ವಿವಿಧ ರೀತಿಯ ಶಾಲುಗಳನ್ನ ಹೊದಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗಿದೆ.
ಈ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಸೇರಿದಂತೆ ಕೆಲವು ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು, ಇದೀಗ ಟ್ವಿಟರ್ನಲ್ಲಿ ಸಖತ್ ಟ್ರೆಂಡ್ ಆಗಿದೆ. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದ ಪಾಕಿಸ್ತಾನ ತಂಡದ ಆಟಗಾರರಿಗೆ ಕೇಸರಿ ಸಾಲು ಹಾಕಿ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಭಾರೀ ಬಿಗಿ ಭದ್ರತೆಯನ್ನೂ ನಿಯೋಜನೆ ಮಾಡಲಾಗಿತ್ತು.

ಪಾಕ್ ಆಟಗಾರರು ಕೇಸರಿ ಶಾಲು ಧರಿಸಿದ ಫೋಟೊ ಮತ್ತು ವೀಡಿಯೋ ಇದೀಗ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪಾಕ್ ತಂಡದ ನಾಯಕ ಬಾಬರ್ ಆಜಂ ಅವರನ್ನ ನೆಟ್ಟಿಗರು ತೆಲಂಗಾಣದ ಬಿಜೆಪಿ ಯುವ ಘಟಕದ ನಾಯಕ ಎಂದು ಟ್ರೋಲ್ ಮಾಡಿದ್ದಾರೆ.

ಪಾಕಿಸ್ತಾನ ತಂಡ ಕೆಲವು ದಿನಗಳ ಹಿಂದೆಯೇ ಭಾರತಕ್ಕೆ ಬರಬೇಕಿತ್ತು. ಆದರೆ ವೀಸಾ ಸಮಸ್ಯೆಯಿಂದ ಪ್ರಯಾಣ ಅಸಾಧ್ಯವಾಗಿತ್ತು. ಇದೇ ವಿಚಾರವಾಗಿ ಪಾಕ್ ಕ್ರಿಕೆಟ್ ಮಂಡಳಿ ವಿಶ್ವಕಪ್ಗೆ ಪೂರ್ವ ತಯಾರಿ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲವೆಂದು ಜಾಗತಿಕ ಸಂಸ್ಥೆಯೊಂದಿಗೆ ಕಳವಳ ವ್ಯಕ್ತಪಡಿಸಿತ್ತು. ಕೊನೆಗೆ ಐಸಿಸಿ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತೀಯ ವೀಸಾಗಳನ್ನು ನೀಡುವ ವ್ಯವಸ್ಥೆ ಮಾಡಿತ್ತು.

7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟ ಪಾಕ್:
ಪಾಕಿಸ್ತಾನ ಕ್ರಿಕೆಟ್ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದೆ. 2008ರಲ್ಲಿ ನಡೆದ ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನೇ ನಿಲ್ಲಿಸಿದೆ. ಆದ್ರೆ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿ ಆಡಲು ಕೊನೆಯ ಬಾರಿ ಪಾಕ್ ತಂಡ ಭಾರತಕ್ಕೆ ಬಂದಿತ್ತು. ಅದಾದ ನಂತರ ಐಸಿಸಿ ಟೂರ್ನಿಯಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದವು. ಇದೀಗ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತಕ್ಕೆ ಭೇಟಿ ನೀಡಿದೆ.