
ತಮಿಳುನಾಡಿನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಸಂಚಲನ ಇದೀಗ ದೆಹಲಿ ನಾಯಕರ ನಿದ್ದೆಗೆಡಿಸಿದೆ. ಅಣ್ಣಾಮಲೈನಿಂದ ಬೇಸತ್ತಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷ ಇದೀಗ ಅಧಿಕೃತವಾಗಿ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಎನ್‌ಡಿಎ ಕೂಟದಿಂದ ಹೊರ ನಡೆದಿದೆ.
ಚೆನ್ನೈ(ಸೆ.25) ತಮಿಳುನಾಡು ಬಿಜೆಪಿ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡ ಅಣ್ಣಾಮಲೈ ತಮಿಳುನಾಡಿನ ರಾಜಕೀಯ ಹೋರಾಟದಲ್ಲಿ . ದ್ರಾವಿಡ ಹೋರಾಟ, ತಮಿಳು ಹೋರಾಟದಲ್ಲೇ ರಾಜಕೀಯ ಜೀವನ ಕಂಡುಕೊಂಡಿದ್ದ ತಮಿಳುನಾಡಿನಲ್ಲಿ ಇದೀಗ ಹಿಂದುತ್ವದ ಕಹಳೆ ಮೊಳಗಿಸಲು ಪ್ರಯತ್ನ ನಡೆಯುತ್ತಿದೆ . ಇದು ಮಿತ್ರಪಕ್ಷಗಳ ಸಿದ್ಧಾಂತಕ್ಕೆ ವಿರುದ್ದ ವಾದುದ್ದು . ಅಣ್ಣಾಮಲೈ ನೀಡಿದ ಹೇಳಿಕೆಯನ್ನೇ ಖಂಡಿಸಿ ಇದೀಗ ಬಿಜೆಪಿ ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಎಐಎಡಿಎಂಕೆ ಅಂತ್ಯಗೊಳಿಸಿದೆ. ಇಷ್ಟೇ ಅಲ್ಲ ಎನ್‌ಡಿಎ ಕೂಟದಿಂದ ಹೊರನಡೆದಿದೆ.

ಲೋಕಸಭಾ ಚುನಾವಣೆಗೆ ಮೊದಲೇ ಎನ್‌ಡಿಎ ಕೂಟಕ್ಕೆ ಆಘಾತ ಎದುರಾಗಿದೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚಿನ ಸ್ಥಾನ ಗೆಲ್ಲುವ ಕನಸಿಗೆ ತೀವ್ರ ಹೊಡೆತ ಬಿದ್ದಿದೆ. ಇಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ್ ಮುನ್ನೇತ್ರ ಕಳಗಂ( ಎಐಎಡಿಎಂಕೆ) ತನ್ನ ಪಕ್ಷದ ಸಂಸದರು, ಶಾಸಕರು ಹಾಗೂ ನಾಯಕರ ಜೊತೆಗೆ ಜಿಲ್ಲಾ ಮಟ್ಟದ ಸಭೆ ನಡೆಸಿ ಮಹತ್ವದ ತೀರ್ಮಾನ ಘೋಷಿಸಿದೆ

ಎಐಎಡಿಎಂಕೆ ನಾಯಕ ಕೆಪಿ ಮುನುಸ್ವಾಮಿ ಮೈತ್ರಿ ಮುರಿದುಕೊಂಡಿರುವ ನಿರ್ಧಾರ ಪ್ರಕಟಿಸಿದ್ದಾರೆ. ಪ್ರಮುಖವಾಗಿ ಅಣ್ಣಾಮಲೈ ನಡವಳಿಕೆ, ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ನಾಯಕ ಅಣ್ಣಾ ದೊರೆಯನ್ನು ಖಂಡಿಸಿರುವುದು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ಭಾಷಣ ಮಾಡುವಾಗ ಡಿಎಂಕೆ ಸಂಸ್ಥಾಪಕ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಜೊತೆಗೆ ಅವರು ಸನಾತನ ಧರ್ಮದ ವಿರುದ್ಧವಾಗಿದ್ದರು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಐಡಿಎಂಕೆ ನಾಯಕರು,‘ಅಣ್ಣಾಮಲೈ ಅವರು ನಿರಂತರವಾಗಿ ಪಕ್ಷದ ನಾಯಕರನ್ನು ಟೀಕಿಸಿ ಅವಮಾನಿಸುತ್ತಿದ್ದಾರೆ. ಇದು ಬಿಜೆಪಿ ಹಾಗೂ ಅಣ್ಣಾಡಿಎಂಕೆ ನಡುವೆ ಬಿರುಕಿಗೆ ಕಾರಣವಾಗಲಿದೆ. ಅವರು ತಮ್ಮ ವೈಯಕ್ತಿಕ ವರ್ಚಸ್ಸನ್ನು ವೃದ್ಧಿಸಿಕೊಳ್ಳುವುದರಲ್ಲಿ ರಾಜ್ಯದ ಹಿರಿಯರಿಗೆ ಅಗೌರವ ತೋರುತ್ತಿದ್ದಾರೆ. ಇದನ್ನು ಸಹಿಸಲಾಗದು. ನಾವು ಸದ್ಯಕ್ಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಇದರ ಬಗ್ಗೆ ಬರುವ ಚುನಾವಣೆ ಸಂದರ್ಭದಲ್ಲಿ ಯೋಚಿಸಲಾಗುವುದು ಎಂದು ತಿಳಿಸಿದ್ದರು. ಇದೀಗ ಪಕ್ಷದೊಳಗೆ ಸಭೆ ನಡೆಸಿ ಮೈತ್ರಿ ಮುರಿದುಕೊಂಡಿರುವ ಅಧಿಕೃತ ಹೇಳಿಕೆ ನೀಡಿದೆ.
