
ಉಡುಪಿ: ಉದ್ಯಮಿಗೆ ಚೈತ್ರಾ ಕುಂದಾಪುರ (Chaitra Kundapur) ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ 7ನೇ ಆರೋಪಿ ಶ್ರೀಕಾಂತ್ (Srikanth Naik) ಮನೆಯನ್ನು ಸಿಸಿಬಿ ಪೊಲೀಸರು (CCB Police) ಜಾಲಾಡಿದ್ದಾರೆ. ಈ ವೇಳೆ ಪೊಲೀಸರಿಗೆ 41 ಲಕ್ಷ ರೂ. ನಗದು ದೊರೆತಿದೆ.

ಗುಡ್ಡೆಯಂಗಡಿಯಲ್ಲಿರುವ (Guddeyangadi) ಶ್ರೀಕಾಂತ್ ಮನೆಯ ಬಾಕ್ಸ್‌ನಲ್ಲಿ ಇಟ್ಟಿದ್ದ 41 ಲಕ್ಷ ರೂ. ನಗದು ಪತ್ತೆಯಾಗಿದೆ. ಅದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಸ ಮನೆಯ ಬಗ್ಗೆ ಶ್ರೀಕಾಂತ್ ನಾಯ್ಕ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಶ್ರೀಕಾಂತ್ 10 ಲಕ್ಷ ರೂ. ಕೊಟ್ಟು ಜಮೀನು ಖರೀದಿ ಮಾಡಿದ್ದು, ಸುಮಾರು 70 ಲಕ್ಷ ರೂ. ಮೊತ್ತದ ಮನೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಚೈತ್ರಾ ಮತ್ತು 7 ಜನರ ಗ್ಯಾಂಗ್ ಬರೋಬ್ಬರಿ 5.50 ಕೋಟಿ ರೂ. ಪೀಕಿಸಿದೆ. ಟಿಕೆಟ್ ಸಿಗದೆ ಕಾಸು ಕಳೆದುಕೊಂಡ ಗೋವಿಂದ ಪೂಜಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚೈತ್ರಾ ಮತ್ತು ತಂಡ ಆ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ರ‍್ಯಾರಿಗೆ ಎಷ್ಟೆಷ್ಟು ಹಂಚಿದ್ದಾರೆ ಎಂದು ಇನ್ನಷ್ಟೇ ವಿಚಾರಗಳು ಬಹಿರಂಗ ಆಗಬೇಕಾಗಿದೆ. ಈ ನಡುವೆ ಚೈತ್ರಾಳ ಗೆಳೆಯ ಶ್ರೀಕಾಂತ್ ನಾಯಕ್ ಗುಡ್ಡೆಯಂಗಡಿಯಲ್ಲಿ ಜಮೀನು ಖರೀದಿಸಿ ಅದರಲ್ಲಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ ಎಂಬುದು ತಿಳಿದುಬಂದಿದೆ

ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಇದುವರೆಗೂ 3 ಕೋಟಿಯಷ್ಟು ಮೌಲ್ಯದ ನಗದು, ಚಿನ್ನ ಜಪ್ತಿ

ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ (Chaithra Kundapura) ಮತ್ತು ತಂಡ 5 ಕೋಟಿ ರೂ. ವಂಚಿಸಿ (Fraud) ಇದೀಗ ಬಂಧನಕ್ಕೊಳಗಾಗಿದ್ದಾರೆ. ಈ ಕುರಿತು ಸಿಸಿಬಿ (CCB) ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದುವರೆಗೂ 3 ಕೋಟಿ ರೂ. ಮೌಲ್ಯದಷ್ಟು ನಗದು ಮತ್ತು ಚಿನ್ನವನ್ನು ಜಪ್ತಿಪಡಿಸಿಕೊಂಡಿದ್ದಾರೆ.

ಯಾರಿಂದ ಎಷ್ಟು ಜಪ್ತಿ?: ಚೈತ್ರಾ ಕುಂದಾಪುರ ತನ್ನ ಸಂಬಂಧಿಕರ ಹೆಸರಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ 1.8 ಕೋಟಿ ರೂ. ಠೇವಣಿ ಇಟ್ಟಿದ್ದು, ಸಿಸಿಬಿ ಅಧಿಕಾರಿಗಳು ಈ ಹಣವನ್ನು ಜಪ್ತಿಪಡಿಸಿಕೊಂಡಿದ್ದಾರೆ. ಅಲ್ಲದೇ ಚೈತ್ರಾ ಮನೆಯಲ್ಲಿದ್ದ 65 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಸಹಾ ಜಪ್ತಿ ಮಾಡಿದ್ದಾರೆ. ಉಪ್ಪೂರು ಶ್ರೀರಾಮ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಚೈತ್ರಾ ಕುಂದಾಪುರ ಬಾವ ಮ್ಯಾನೇಜರ್ ಆಗಿದ್ದರು. ಅವರ ಸಹಾಯದ ಮೂಲಕ ಶ್ರೀರಾಮ್ ಬ್ಯಾಂಕ್‌ನಲ್ಲಿ ಚೈತ್ರಾ 40 ಲಕ್ಷ ರೂ. ಹಣವನ್ನು ಇಟ್ಟಿದ್ದಳು. ಈ ಹಣವನ್ನೂ ಅಧಿಕಾರಿಗಳು ವಶಕ್ಕೆ ಪಡಿದಿದ್ದಾರೆ

ಚೈತ್ರಾಳ ಗೆಳೆಯ ಶ್ರೀಕಾಂತ್ ನಾಯಕ್ (Shrikanth Nayak) ಖಾತೆಯಲ್ಲಿದ್ದ 45 ಲಕ್ಷ ರೂ. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇನ್ನು ಅಭಿನವ ಹಾಲಶ್ರೀ ಸ್ವಾಮೀಜಿ ಈಗಾಗಲೇ 50 ಲಕ್ಷ ರೂ. ನಗದನ್ನು ಗೋವಿಂದ ಪೂಜಾರಿಗೆ (Govinda Babu Poojari) ಹಿಂದಿರುಗಿಸಿದ್ದಾರೆ. ಸದ್ಯ ಚೈತ್ರಾ ಖರೀದಿ ಮಾಡಿದ್ದ ಕಿಯಾ ಕಾರನ್ನು ಸಿಸಿಬಿ ವಶಕ್ಕೆ ಪಡೆದಿದೆ. ಸುಮಾರು 3.30 ಕೋಟಿ ರೂ. ಮೌಲ್ಯದ ಕಾರು, ಚಿನ್ನಾಭರಣ ಹಾಗೂ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಉಳಿದ ಹಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.