
ಪಂದ್ಯ ರದ್ದಾದರೆ ಮೀಸಲು ದಿನಕ್ಕೆ ಶಿಫ್ಟ್
ಕೊಲೊಂಬೋ: ಭಾರತ ಮತ್ತು ಪಾಕಿಸ್ತಾನ (IND vs Pak) ನಡುವಿನ ಏಷ್ಯಾಕಪ್ (Asia Cup 2023) ಸೂಪರ್ 4 ಹಂತದ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ ಆಗಿದೆ. ಲೀಗ್‌ನಲ್ಲಿ ಪಂದ್ಯ ಮಳೆಯಿಂದ ವಾಶ್‌ಔಟ್ ಆಗಿತ್ತು. ಇವತ್ತಿನ ಪಂದ್ಯಕ್ಕೂ ವರುಣ ಅವಕೃಪೆ ತೋರುವ ಭೀತಿ ಎದುರಾಗಿದ್ದು, ಇಂದು ಪಂದ್ಯ ರದ್ದಾದರೆ ಮೀಸಲು ದಿನಕ್ಕೆ ಶಿಫ್ಟ್ ಆಗಲಿದೆ. ಆದರೆ ಮೀಸಲು ದಿನದ ಆಟಕ್ಕೆ ಕೆಲ ನಿಯಮಗಳ ಬದಲಾಗಲಿವೆ.

ಶ್ರೀಲಂಕಾದಲ್ಲಿ (Sri Lanka) ನಡೆಯುತ್ತಿರೋ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಬದ್ದ ವೈರಿಗಳ ಕಾಳಗಕ್ಕೆ ಕ್ಷಣಗಣನೆ ಆರಂಭವಾಗಿದೆ. ಸರಣಿಯ ಲೀಗ್ ಹಂತದಲ್ಲಿ ಪ್ರೇಕ್ಷಕರ ಆಸೆಗೆ ಮಳೆರಾಯ ತಣ್ಣೀರೆರಚಿದ್ದ. ಆದರೆ ಅದಾದ ಬಳಿಕ ಮತ್ತೆ ಎರಡು ತಂಡಗಳು ಇಂದು ಸೂಪರ್ 4 ಹಂತದಲ್ಲಿ ಮತ್ತೆ ಕಾಳಗಕ್ಕೆ ಸಜ್ಜಾಗಿದ್ದು, ಪಂದ್ಯ ಕುತೂಹಲ ಕೆರಳಿಸಿದೆ.

ಶ್ರೀಲಂಕಾದ ಕೊಲಂಬೋದಲ್ಲಿ ಭಾರತ-ಪಾಕ್ ತಂಡಗಳು ಎದುರಾಗಲಿವೆ. ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಭಾರತ ತಂಡದ ಘಟಾನುಘಟಿ ಆರಂಭಿಕ ಬ್ಯಾಟರ್ ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್ ಮಕಾಡೆ ಮಲಗಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶಾನ್ ಜೊತೆಯಾಗಿದ್ದ ಪಾಂಡ್ಯ ಭಾರತವನ್ನ 250 ರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು.

ಅತ್ತ ಪಾಕಿಸ್ತಾನ ತಂಡ ಕೂಡ ಬಲಿಷ್ಠವಾಗಿದ್ದು, ಸ್ಪೀಡ್ ಬೌಲರ್‌ಗಳ ಮೂಲಕ ಭಾರತೀಯ ಬ್ಯಾಟ್ಸ್ಮನ್‌ಗಳನ್ನ ಕಾಡಲು ತಯಾರಿ ನಡೆಸಿದ್ದು, ಶಾಹಿನ್ ಆಫ್ರಿದಿ, ಮಹಮ್ಮದ್ ರೌಫ್, ನಸ್ಸಿಮ್ ಶಾ ರಂತಹ ಬಲಿಷ್ಠ ಬೌಲಿಂಗ್ ಪಡೆಯೊಂದಿಗೆ ಪಾಕ್ ತಂಡ ಕಣಕ್ಕಿಳಿಯಲು ತಯಾರಿ ನಡೆಸಿದೆ. ಇತ್ತ ತವರಿಗೆ ವಾಪಸ್ ಆಗಿದ್ದ ಬುಮ್ರಾ ಮತ್ತೆ ತಂಡಕ್ಕೆ ವಾಪಸ್ ಆಗಿದ್ದು, ಭಾರತ ತಂಡದ ಬೌಲಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಏಷ್ಯಾಕಪ್ ಇತಿಹಾಸದಲ್ಲಿ ಒಟ್ಟು 16 ಪಂದ್ಯಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಭಾರತ 9 ಬಾರಿ ಗೆಲುವು ಸಾಧಿಸಿದ್ದು, ಪಾಕಿಸ್ತಾನ 6 ಬಾರಿ ಮಾತ್ರ ಜಯ ಸಾಧಿಸಿದೆ. ಉಳಿದ ಒಂದು ಪಂದ್ಯ ಫಲಿತಾಂಶ ಇಲ್ಲದೆ ಕೊನೆಗೊಂಡಿದೆ. ಇನ್ನೂ ಸದ್ಯ ಇವತ್ತಿನ ಪಂದ್ಯಕ್ಕೆ ಮಳೆಯ ಭೀತಿ ಇದ್ದು, ಒಂದೊಮ್ಮೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಪಂದ್ಯ ಮೀಸಲು ದಿನಕ್ಕೆ ಶಿಫ್ಟ್ ಆಗಲಿದೆ. ಆದರೆ ಮೀಸಲು ದಿನದಲ್ಲಿ ಹಿಂದಿನ ಪಂದ್ಯ ಎಲ್ಲಿಗೆ ಸ್ಥಗಿತಗೊಂಡಿತ್ತು, ಅಲ್ಲಿಂದಲೇ ಆರಂಭವಾಗಲಿದೆ.