
ಮಂಗಳೂರು: ಯುವಕನೋರ್ವ ವೀಡಿಯೋ (Video) ಮಾಡಿ ತನ್ನ ಸಾವಿಗೆ ಯಾರೆಲ್ಲ ಕಾರಣ ಎಂದು ಹೇಳಿ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ (Putturu) ನಡೆದಿದೆ.

ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅದ್ರಾಮ ಎಂಬವರ ಮನೆಯಲ್ಲಿ ನಾಸಿರ್ ಕಾರು ಚಾಲಕನಾಗಿದ್ದು, ಇತ್ತೀಚೆಗೆ ಅದ್ರಾಮನ ಕುಟುಂಬದ ಹೆಣ್ಣಿನ ಜೊತೆ ಸಂಬಂಧ ಇದೆಯೆಂದು ಹೇಳಿ ಅದ್ರಾಮ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿರೋದಾಗಿ ಆರೋಪಿಸಿದ್ದಾನೆ. ಅದ್ರಾಮ ಹಾಗೂ ಹೆಣ್ಣಿನ ಗಂಡ, ಮತ್ತೋರ್ವನ ಜೊತೆ ಕಾರಿನಲ್ಲಿರುವಾಗಲೇ ಅವರ ಎದುರೇ ಮೊಬೈಲ್ ವೀಡಿಯೋ ಮೂಲಕ ತನ್ನ ನೋವನ್ನು ಹೇಳಿಕೊಂಡಿದ್ದಾನೆ.

ನನಗೆ ಯಾವುದೇ ಹೆಣ್ಣಿನ ಜೊತೆ ಸಂಬಂಧ ಇಲ್ಲ, ಆಕೆಯ ಗಂಡನೇ ಈ ಕಾರಿನಲ್ಲಿದ್ದಾನೆ ಎನ್ನುತ್ತಾ ಮೂವರನ್ನೂ ವೀಡಿಯೋದಲ್ಲಿ ತೋರಿಸಿ ಇವರೇ ನನ್ನ ಸಾವಿಗೆ ಕಾರಣ, ನಾನು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿ ವೀಡಿಯೋವನ್ನು ಕೊನೆಗೊಳಿಸಿದ್ದಾನೆ.

ಬಳಿಕ ನಾಸಿರ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

”ತಾನು ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್. ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದೆ. ಆದರೆ ಅದ್ರಾಮ, ಅವರ ಅಣ್ಣ, ಅಣ್ಣನ ಮಕ್ಕಳು ಸೇರಿ ಬೆಳ್ಳಾರೆಯಲ್ಲಿ ಹಲ್ಲೆ ನಡೆಸಿದ್ದಾರೆ. ಇದೀಗ ಅವರೇ ನನ್ನನ್ನು ಪುತ್ತೂರಿಗೆ ಕರೆದೊಯ್ದು ಬಿಡುತ್ತಿದ್ದಾರೆ. ನನಗೆ ಅವರೊಂದಿಗೆ ಡ್ರೈವರ್ ಇದ್ದಾಗ ಇರುವ ಸಂಬಂಧ ಬಿಟ್ಟರೆ ಬೇರೇನೂ ಸಂಬಂಧವಿಲ್ಲ. ನಾನು ಈಗ ಪುತ್ತೂರಿಗೆ ಹೋಗಿ ಸಾವಿಗೆ ಶರಣಾಗುತ್ತೇನೆ. ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ’ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಈ ವ್ಯಕ್ತಿ ಕಾರಲ್ಲಿ ಕೂತು ವೀಡಿಯೋ ಮಾಡಿದ್ದು ಕಾರಲ್ಲಿದ್ದವರು ಈ ವ್ಯಕ್ತಿ ಆತ್ಮಹತ್ಯೆ ಮಾಡುತ್ತೇನೆಂದು ಹೇಳುವಾಗ ಸುಮ್ಮನೆ ಕೂತಿರುವುದು ವೀಡಿಯೋದಲ್ಲಿ ಕಾಣಬಹುದು.