
ದುಡಿಮೆಗಾಗಿ ಹೋಗಿದ್ದ ದಾವಣಗೆರೆ ಜಿಲ್ಲೆ ಮೂಲದ ಕನ್ನಡಿಗರ ಕುಟುಂಬವೊಂದು ಅಮೇರಿಕಾದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದೆ.
ದಾವಣಗೆರೆ (ಆ.19): ದೇಶವನ್ನು ಬಿಟ್ಟು ವಿದೇಶಕ್ಕೆ ಹೋಗಿ ಚೆನ್ನಾಗಿ ದುಡಿದು, ಸಂಪಾದನೆ ಮಾಡಿ ನೆಮ್ಮದಿಯಾಗಿ ಜೀವನ ಮಾಡೋಣವೆಂದು ಹೋಗಿದ್ದ ದಾವಣಗೆರೆ ಜಿಲ್ಲೆ ಮೂಲದ ಕನ್ನಡಿಗರ ಕುಟುಂಬವೊಂದು ಅಮೇರಿಕಾದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದೆ.

ದಾವಣಗೆರೆ ಮೂಲದ ಪತಿ,ಪತ್ನಿ ಗಂಡು ಮಗು ಮೂವರು ಅಮೇರಿಕಾದಲ್ಲಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಘಟನೆ ನಡೆದಿದೆ. ಮೃತರನ್ನು ಯೋಗೇಶ್ ಹೊನ್ನಾಳ (37), ಪ್ರತಿಭಾ ಹೊನ್ನಾಳ್ (35) ಹಾಗೂ ಅವರ ಪುತ್ರ ಯಶ್ ಹೊನ್ನಾಳ್(6) ಸಾವನ್ನಪ್ಪಿದ್ದಾರೆ. ಇವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದವರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದಾವಣಗೆರೆಯಲ್ಲಿ ಬಂದು ಕುಟುಂಬ ಸಮೇತ ವಾಸವಾಗಿದ್ದರು. ಆದರೆ, ಕುಟುಂಬದಲ್ಲಿ ಯೋಗೇಶ್ ಕುಟುಂಬ ಅಮೇರಿಕಾಗೆ ಹೋಗಿ ನೆಲೆಸಿತ್ತು.

ಕಳೆದ 9 ವರ್ಷಗಳ ಹಿಂದೆ ದಾವಣೆಗೆರೆಯಲ್ಲಿ ಯೋಗೇಶ್ ಮತ್ತು ಪ್ರತಿಭಾ ಮದುವೆ ಆಗಿದ್ದರು. ನಂತರ ಕುಟುಂಬ ಸಮೇತವಾಗಿ ಹೋಗಿ ಅಮೇರಿಕಾದಲ್ಲಿ ವಾಸವಾಗಿದ್ದರು. ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಈ ಕುಟುಂಬದ ಸಾವಿನ ಹಿನ್ನೆಲೆಯಲ್ಲಿ ಹಲವುಯ ಅನುಮಾನಗಳು ಸೃಷ್ಟಿಯಾಗಿವೆ. ಇನ್ನು ಕರ್ನಾಟಕದಲ್ಲಿರುವ ಅವರ ಕುಟುಂಬ ಸದಸ್ಯರು ಸಾವಿನ ನಿಖರ ಕಾರಣ ತಿಳಿಸುವಂತೆ, ಬಾಡಿ ಸ್ವದೇಶಕ್ಕೆ ತರಿಸಿಕೊಡುವಂತೆ ದಾವಣಗೆರೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
