
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Vidhan Sabha Election) ಹೀನಾಯವಾಗಿ ಸೋತು, ಸದ್ಯ ನಾಯಕನಿಲ್ಲದೇ ಕಂಗೆಟ್ಟಿರುವ ಬಿಜೆಪಿಗೆ (BJP) ಠಕ್ಕರ್ ಕೊಡಲು ಕಾಂಗ್ರೆಸ್ (Congress) ಮುಂದಾಗಿದ್ದು ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದರೊಬ್ಬರಿಗೆ ಗಾಳ ಹಾಕಿದೆ.

ಹೌದು. ಲೋಕಸಭೆ ಚುನಾವಣೆಯನ್ನು (Lok Sabha Election) ದೃಷ್ಟಿಯಲ್ಲಿಟ್ಟುಕೊಂಡು ಆಪರೇಷನ್ ಹಸ್ತಕ್ಕೆ (Operation Congress) ಮುಂದಾಗಿರುವ ಕಾಂಗ್ರೆಸ್ ನಾಯಕರು ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿ ಬಾಂಬೆ ಫ್ರೆಂಡ್ಸ್ನ ಹಲವರನ್ನು ಸೆಳೆಯಲು ಮುಂದಾಗುತ್ತಿದೆ. ಇದನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತಿರುವ ಬಿಜೆಪಿಗೆ ಮತ್ತೊಂದು ಶಾಕ್ ನೀಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ

ಹಿಂದುತ್ವದ ಪ್ರಯೋಗ ಶಾಲೆ ಎನಿಸಿರುವ ಕರಾವಳಿಯಲ್ಲೂ ಆಪರೇಷನ್ಗೆ ಕೈಹಾಕಿದೆ. ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದರೊಬ್ಬರಿಗೆ (BJP MP) ಗಾಳ ಹಾಕಲು ಯತ್ನಿಸಿದೆ. ಪ್ರಬಲ ಸಮುದಾಯಕ್ಕೆ ಸೇರಿದ ಅವರನ್ನು ದಕ್ಷಿಣ ಕನ್ನಡದಲ್ಲಿ ಕಣಕ್ಕಿಳಿಸುವ ಮೂಲಕ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮಡಿಕೇರಿಯಲ್ಲೂ ಲಾಭ ಪಡೆಯುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.

ಆಪರೇಷನ್ ಹಸ್ತ ನಡೆಯುತ್ತಿರುವುದನ್ನು ಕೈ ನಾಯಕರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಬಿಜೆಪಿ, ಜೆಡಿಎಸ್ನ 10-15 ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್ ಸೇರಲು ರೆಡಿಯಾಗಿದ್ದಾರೆ ಎಂಬ ಸ್ಫೋಟಕ ವಿಚಾರವನ್ನು ಸಚಿವ ಚಲುವರಾಯಸ್ವಾಮಿ ಬಹಿರಂಗವಾಗಿಯೇ ಹೇಳಿದ್ದಾರೆ.
ರಾಜಕೀಯದಲ್ಲಿ ಏನು ಬೇಕಿದ್ದರೂ ಆಗಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾಲಕ್ಕೆ ತಕ್ಕಂತೆ ನಿರ್ಧಾರಗಳು ಬದಲಾಗುತ್ತವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ವಲಸಿಗರಿಗೆ ಮಣೆ ಹಾಕಲು ಮುಂದಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅವರಾಗಿಯೇ ಬರುತ್ತೇನೆ ಎಂದರೆ ಬೇಡ ಎನ್ನಲು ಆಗುವುದಿಲ್ಲ ಎಂದು ಗೃಹಮಂತ್ರಿ ಪರಮೇಶ್ವರ್ ಹೇಳಿದ್ದಾರೆ.