
ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದಿದ್ದ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ನವದೆಹಲಿ (ಆಗಸ್ಟ್ 4, 2023): ಮೋದಿ ಸರ್‌ನೇಮ್ ಕೇಸ್ ವಿವಾದದಲ್ಲಿ ಸುಪ್ರೀಂಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ನೀಡಿದೆ. ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದಿದ್ದ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದ ರಾಹುಲ್ ಗಾಂಧಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದಾಗಿದೆ. ಅಲ್ಲದೆ, ಅವರು ವಯನಾಡ್ ಸಂಸದರಾಗಿಯೇ ಮುಂದುವರಿಯಬಹುದು ಹಾಗೂ ಪ್ರಸ್ತುತ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಬಹುದು ಎಂದೂ ತಿಳಿದುಬಂದಿದೆ.

ವಿಚಾರಣಾ ನ್ಯಾಯಾಲಯ ಈ ಪ್ರಕರಣದಲ್ಲಿ ಗರಿಷ್ಠ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. ಆ ಶಿಕ್ಷೆ ಒಂದು ದಿನ ಕಡಿಮೆಯಾದರೂ ಅನರ್ಹತೆಯಾಗುವುದಿಲ್ಲ ಎಂದೂ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಗಮನಿಸಿದೆ. ಅರ್ಜಿದಾರರ ಮಾತುಗಳು ಉತ್ತಮ ಅಭಿರುಚಿಯಲ್ಲಿಲ್ಲ ಎಂಬುದರಲ್ಲಿ ಸಂದೇಹವಿಲ್ಲ, ಮತ್ತು ಅರ್ಜಿದಾರರು ಭಾಷಣ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದೂ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಗೆ ಪರೋಕ್ಷ ಎಚ್ಚರಿಕೆ ನೀಡಿದೆ. “ಅನರ್ಹತೆ ವ್ಯಕ್ತಿಯ ಹಕ್ಕಿನ ಮೇಲೆ ಮಾತ್ರವಲ್ಲದೆ ಮತದಾರರ ಮೇಲೂ ಪರಿಣಾಮ ಬೀರುತ್ತವೆ” ಎಂದೂ ಕೋರ್ಟ್ ಹೇಳಿದೆ.

ಸಂಸತ್ತಿಗೆ ಹಾಜರಾಗಲು ಮತ್ತು ಚುನಾವಣೆಗೆ ಸ್ಪರ್ಧಿಸಲು ರಾಹುಲ್ ಗಾಂಧಿ ಅವರನ್ನು ಖುಲಾಸೆಗೊಳಿಸಲು ಇದು ಕೊನೆಯ ಅವಕಾಶವಾಗಿದೆ ಎಂದು ರಾಹುಲ್ ಗಾಂಧಿ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಹೈಕೋರ್ಟ್ ತನ್ನ ತೀರ್ಪನ್ನು 66 ದಿನಗಳವರೆಗೆ ಕಾಯ್ದಿರಿಸಿತ್ತು, ಮತ್ತು ಪ್ರಕರಣದಲ್ಲಿ ಶಿಕ್ಷೆಯ ಕಾರಣದಿಂದಾಗಿ, ರಾಹುಲ್ ಗಾಂಧಿ ಅವರು ಈಗಾಗಲೇ ಎರಡು ಸಂಸತ್ತು ಅಧಿವೇಶನಗಳನ್ನು ಕಳೆದುಕೊಂಡಿದ್ದಾರೆ ಎಂದು ಅವರ ವಕೀಲರು ಹೇಳಿದರು.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ತನ್ನ ದೋಷಾರೋಪಣೆಗೆ ತಡೆಯಾಜ್ಞೆ ನೀಡುವಂತೆ ರಾಹುಲ್ ಗಾಂಧಿ ಮಾಡಿದ ಮನವಿಯ ವಿಚಾರಣೆ ನಡೆಸಿದೆ.. ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ಈ ಹಿಂದೆ ನಿರಾಕರಿಸಿತ್ತು.

ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು 2019 ರಲ್ಲಿ ಸಲ್ಲಿಸಿದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 499 ಮತ್ತು 500 (ಕ್ರಿಮಿನಲ್ ಮಾನನಷ್ಟ) ಅಡಿಯಲ್ಲಿ ದೋಷಾರೋಪಣೆ ಮಾಡಿದ ನಂತರ ಮಾರ್ಚ್ 23 ರಂದು ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. “ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವನ್ನಾಗಿ ಮಾಡಿಕೊಂಡರೆ ಹೇಗೆ?” ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಅವರ ವಿರುದ್ಧ ಶಾಸಕರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಅವರು ಈ ಹೇಳಿಕೆ ನೀಡಿದ್ದರು.
ಈ ಆದೇಶವನ್ನು ರಾಹುಲ್ ಗಾಂಧಿಯವರು ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಶಿಕ್ಷೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದರು. ಅದರೆ, ಅವರಿಗೆ ಜಾಮೀನು ನೀಡಿದರೂ ಏಪ್ರಿಲ್ 20 ರಂದು ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಲು ನಿರಾಕರಿಸಿತು. ನಂತರ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಗುಜರಾತ್ ಹೈಕೋರ್ಟ್ ಸಹ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿತ್ತು.