|Ashraf Kammaje
Updated on: Aug 04, 2023 | 8:24 AM

ಮಣಿಪುರದಲ್ಲಿ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಜನರ ಗುಂಪೊಂದು ಪೊಲೀಸರನ್ನು ಹತ್ಯೆ ಮಾಡಿ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕದ್ದು ಪರಾರಿಯಾಗಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ (Violence) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಜನರ ಗುಂಪೊಂದು ಪೊಲೀಸರನ್ನು ಹತ್ಯೆ ಮಾಡಿ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕದ್ದು ಪರಾರಿಯಾಗಿದ್ದಾರೆ. ಮಣಿಪುರದ ಬಿಷ್ಣುಪುರದಲ್ಲಿ ಈ ಘಟನೆ ನಡೆದಿದೆ, ಎರಡು ಭದ್ರತಾ ಪೋಸ್ಟ್ಗಳನ್ನು ಧ್ವಂಸಗೊಳಿಸಲಾಗಿದ್ದು, ನಂತರ ಬಂದೂಕು, ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರ ಪೊಲೀಸರ ಪ್ರಕಾರ ಪುರುಷರು ಹಾಗೂ ಮಹಿಳೆಯರನ್ನೊಳಗೊಂಡ ಗುಂಪು, ಬಿಷ್ಣುಪುರ ಜಿಲ್ಲೆಯಲ್ಲಿ ಕೀರೆನ್‌ಫಾಬಿ ಪೊಲೀಸ್ ಔಟ್‌ಪೋಸ್ಟ್ ಮತ್ತು ತಂಗಲವಾಯ್ ಪೊಲೀಸ್ ಔಟ್‌ಪೋಸ್ಟ್ ಅನ್ನು ದೋಚಿದೆ. ಜನಸಮೂಹವು ಹೀಂಗಾಂಗ್ ಮತ್ತು ಸಿಂಗ್ಜಮೇಯಿ ಪೊಲೀಸ್ ಠಾಣೆಗಳಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತು, ಆದರೆ ಭದ್ರತಾ ಪಡೆಗಳು ಅವರ ದಾಳಿಯನ್ನು ವಿಫಲಗೊಳಿಸಿದವು.

ಕೌಟ್ರುಕ್, ಹರಾಥೆಲ್ ಮತ್ತು ಸೆಂಜಮ್ ಚಿರಾಂಗ್ ಪ್ರದೇಶಗಳಲ್ಲಿ ಸಶಸ್ತ್ರ ದಾಳಿಕೋರರು ಮತ್ತು ಭದ್ರತಾ ಪಡೆಗಳು ಗುಂಡಿನ ಚಕಮಕಿ ನಡೆಸಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಗುಂಡಿನ ಚಕಮಕಿಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಇಂಫಾಲ್ ವೆಸ್ಟ್‌ನ ಸೆಂಜಮ್ ಚಿರಾಂಗ್‌ನಲ್ಲಿ ಮಣಿಪುರ ಪೊಲೀಸ್ ಸಿಬ್ಬಂದಿಗೆ ಸ್ನೈಪರ್‌ನಿಂದ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. 500-600 ಜನರ ದೊಡ್ಡ ಗುಂಪು, ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ನಡುವಿನ ಗಡಿಯಲ್ಲಿರುವ ಫೌಗಕ್‌ಚಾವೊ ಇಖಾಯ್‌ನಲ್ಲಿ ಜಮಾಯಿಸಿದೆ.

ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದು, ಸುಮಾರು 25 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಣಿಪುರದ ಬೆಟ್ಟ ಮತ್ತು ಕಣಿವೆ ಜಿಲ್ಲೆಗಳಲ್ಲಿ ಒಟ್ಟು 129 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು 1,047 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಶಾನ್ಯ ರಾಜ್ಯವು ಮೈಥಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಯಲ್ಲಿ ಸಿಲುಕಿಕೊಂಡಿದೆ.